ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

ತುಮಕೂರು: ಅಬ್ದುಲ್ ಕಲಾಂ, ಸರ್ .ಎಂ. ವಿಶ್ವೇಶ್ವರಯ್ಯ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು. ನಗರದ ಎಸ್ ಎಸ್ ಐ ಟಿ ಕಾಲೇಜಿನ ಸಭಾಂಗಣದಲ್ಲಿ ಇನಿಶಿಯೇಟಿವ್ ಫಾರ್ ಡೆವಲಪ್ಮೆಂಟ್ ಫೌಂಡೇಶನ್ ಬೆಂಗಳೂರು ಹಾಗೂ ಗ್ರಾಮ್ ಸರ್ವ್ ಪ್ರೈ ಲಿಮಿಟೆಡ್ ಇವರ ಆಶ್ರಯದಲ್ಲಿ ಐಡಿಎಫ್ ವಿದ್ಯಾವೇತನ ಚಾಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತಿಚೆಗೆ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಯೋಜನೆಗಳನ್ನು ತಂದಿದೆ. ಪ್ರತಿಯೊಬ್ಬರಿಗೂ ಒಂದರಿಂದ ಹತ್ತನೆ ತರಗತಿಯವರೆಗೆ ಉಚಿತ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದರೆ ಉನ್ನತ ವ್ಯಾಸಂಗಕ್ಕೆ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೆರವು ನೀಡುತ್ತವೆ. VATTIKUTI ಫೌಂಡೇಶನ್ ಮತ್ತು ಐಡಿಎಫ್ ಸಂಸ್ಥೆಗಳು ಬಡತನದಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್. ಸಾಲಿಮಠ ಮಾತನಾಡಿ, ಐಡಿಎಫ್ ಸಂಸ್ಥೆಯು ವಟ್ಟಿಕುಟಿ ಪ್ರತಿಷ್ಠಾನದ ಆರ್ಥಿಕ ಸಹಾಯದೊಂದಿಗೆ ವಿದ್ಯಾವೇತನ ಯೋಜನೆಯನ್ನು ಜಾರಿಗೊಳಿಸಿತು. ಇದರಡಿ 10ನೇ ತರಗತಿಯಲ್ಲಿ ಉತ್ತೀರ್ಣರಾದ ಬಡ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗುರುತಿಸಿ, ಪ್ರತಿ ವರ್ಷ 5 ರಿಂದ 10 ವಿದ್ಯಾರ್ಥಿಗಳಿಗೆ ವಿದ್ಯಾವೇತನವನ್ನು ನೀಡಲಾಗಿದೆ.ವಿದ್ಯಾವೇತನ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಸಂಪೂರ್ಣ (ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ಪುಸ್ತಕಗಳ ವೆಚ್ಚ ಇತರೆ) ವೆಚ್ಚವನ್ನು ಭರಿಸಲಾಗಿದೆ. ಪಿಯುಸಿಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಯವರೆಗೆ ಎಲ್ಲಾ ರೀತಿಯ ಕೋರ್ಸುಗಳಿಗೆ ನೆರವು ನೀಡಲಾಗಿದೆ. ಒಟ್ಟಾರೆಯಾಗಿ ಇದುವರೆಗೆ 50 ಜನರಿಗೆ ಒಟ್ಟು 41,53,780 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದೆ.ಇವರಲ್ಲಿ 8 ವಿದ್ಯಾರ್ಥಿಗಳು ಬಿಇ, 2 ಮಂದಿ ಸ್ನಾತಕೋತ್ತರ ಪದವಿ, 8 ಮಂದಿ ಪದವಿ ಹಾಗೂ ಒಬ್ಬರು ಐಟಿಐ ವ್ಯಾಸಂಗ ಮಾಡಿರುವುದು ಸಂತಸ ತಂದಿದೆ. ಇವರಲ್ಲಿ ಹೆಚ್ಚಿನವರು ವೃತ್ತಿಗೆ ಸೇರಿ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಮದುವೆ, ತಾತ್ಕಾಲಿಕ ವಿರಾಮ ಅಥವಾ ಶೈಕ್ಷಣಿಕ ವೈಫಲ್ಯ ಇತ್ಯಾದಿ ಕಾರಣಗಳಿ0ದ ಸುಮಾರು 27 ಮಂದಿ ವ್ಯಾಸಂಗ ಸ್ಥಗಿತಗೊಳಿಸಿ ವಿದ್ಯಾವೇತನಕ್ಕೆ ಅನರ್ಹರಾದರೂ, 13 ಮಂದಿ ನಂತರದಲ್ಲಿ ವ್ಯಾಸಂಗ ಮುಂದುವರೆಸಿದ್ದಾರೆ.ಪ್ರಸ್ತುತ ನಾಲ್ವರು ಪದವಿ ಮತ್ತು 3 ಮಂದಿ ಸ್ನಾತಕೋತ್ತರ ಅಧ್ಯಯನ ಮುಂದುವರಿಸುತ್ತಿದ್ದಾರೆ ಎಂದು ತಿಳಿಸಿದರು.ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಬಿ.ರವಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಹಲವು ಎಡರು ತೊಡರು ಬರುತ್ತವೆ. ಅವುಗಳನ್ನು ಲೆಕ್ಕಿಸದೆ ಛಲದಿಂದ ನಿರಂತರ ಅಭ್ಯಾಸದಲ್ಲಿ ತೊಡಗಿ ದಾಗ ಉನ್ನತ ಹುದ್ದೆಗಳು ತಾನಾಗಿಯೇ ಒಲಿದು ಬರುತ್ತವೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಂಡ ಫಲಾನುಭವಿಗಳು ಮಾತನಾಡಿ, ತಮ್ಮ ಮನೆಯ ಪರಿಸ್ಥಿತಿಯಲ್ಲಿ ಕಾಲೇಜಿಗೆ ಹೋಗುವುದು ಅಸಾಧ್ಯವಾಗಿತ್ತು ಎಂದು ತಮಗಾದ ಸಹಾಯವನ್ನು ಸ್ಮರಿಸಿಕೊಂಡರು. ಮುಂದಿನ ದಿನದಲ್ಲಿ ನಾವು ಸಹಾಯ ಮಾಡಲು ಮುಂದಾಗುತ್ತೇವೆ ಎಂದು ಅಭಿಪ್ರಾಯ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಸ್ವಾವಲಂಬನ ಟ್ರಸ್ಟ್ ಅಧ್ಯಕ್ಷ ಎಲ್.ವಿ. ಸತ್ಯಮಾದವ, ಗ್ರಾಮ್ ಸರ್ವ್ ಕಂಪನಿಯ ಸಿಇಒ ಬಸವರಾಜ ಆರ್ ಹಿರೇಮಠ, ಯೋಜನಾಧಿಕಾರಿ ಮು.ಲ.ಕೆಂಪೇಗೌಡ, ಗುರುದತ್, ಕರುಣಾಕರ್, ಎನ್.ಎಂ.ಕುಂಬಯ್ಯ ಇತರರು ಭಾಗವಹಿಸಿದ್ದರು.