ತುಮಕೂರು ವಿವಿ ಕುಲಸಚಿವರಾಗಿ ನಹಿದಾ ಜಮ್ ಜಮ್ ಅಧಿಕಾರ ಸ್ವೀಕಾರ

ತುಮಕೂರು: ತುಮಕೂರು ವಿವಿಯ ಶೈಕ್ಷಣಿಕ ಅಭಿವೃದ್ಧಿಗಾಗಿ, ವಿದ್ಯಾರ್ಥಿಗಳ ಏಳ್ಗೆಗಾಗಿ ದುಡಿಯಲು ನಾನು ಸದಾ ಸಿದ್ಧ. ಮಾತಿಗಿಂತ ಕಾರ್ಯದಲ್ಲಿ ನನ್ನ ಸಾಧನೆ ತೋರಿಸುತ್ತೇನೆ. ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ನನ್ನ ಆದ್ಯತೆಯಾಗಲಿದೆ ಎಂದು ನೂತನ ಕುಲಸಚಿವೆ ನಹಿದಾ ಜಮ್ ಜಮ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಮಂಗಳವಾರ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಸಾಧ್ಯವಾದಷ್ಟೂ ಜಡತ್ವ ಬಿಟ್ಟು ಕೆಲಸ ಮಾಡೋಣ. ಒಗ್ಗಟ್ಟು ನಮ್ಮ ವಿಶ್ವವಿದ್ಯಾನಿಲಯದ ಸ್ಥಾನವನ್ನು ರಾಜ್ಯ, ದೇಶದ ಮಟ್ಟದಲ್ಲಿ ಹೆಸರುವಾಸಿ ಮಾಡಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಷ್ಟೇ ನಮ್ಮ ಗುರಿಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನೂತನ ಕುಲಸಚಿವೆಯಾಗಿ ವಿಶ್ವವಿದ್ಯಾನಿಲಯದ ಜವಾಬ್ದಾರಿ ಹೆಚ್ಚಿದೆ. ಕಿರಿಯ ವಯಸ್ಸಿನಲ್ಲೇ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೊರಟಗೆರೆಯಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿ, ಧಕ್ಷತೆಗೆ, ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ನೀವು ನಮ್ಮ ವಿವಿ ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆ. ವಿವಿಯಲ್ಲಿ ಎಲ್ಲರಿಂದಲೂ ಸಹಕಾರ ದೊರೆಯಲಿದೆ ಎಂದರು.