ಭಾರತ vs ನ್ಯೂಜಿಲೆಂಡ್: ಅಂತಿಮ ಪಂದ್ಯದಲ್ಲಿಯೂ ಭಾರತಕ್ಕೆ ಭರ್ಜರಿ ಗೆಲುವು; ಮತ್ತೊಂದು ಸರಣಿ ವೈಟ್‌ವಾಶ್

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಬಳಿಕ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಹೀಗಾಗಿ ಈ ಬೃಹತ್ ಮೊತ್ತದ ಪಂದ್ಯದಲ್ಲಿ ಟೀಮ್ ಇಂಡಿಯಾ 90 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ಸತತ ಎರಡನೇ ಸರಣಿಯನ್ನು ತವರಿನಲ್ಲಿ ವೈಟ್‌ವಾಶ್ ಮೂಲಕ ವಶಕ್ಕೆ ಪಡೆದುಕೊಂಡಿದೆ. ಇದು ಟೀಮ್ ಇಂಡಿಯಾ ಭಾರತದಲ್ಲಿ ಸಾಧಿಸಿರುವ ಸತತ 7ನೇ ಏಕದಿನ ಸರಣಿ ಗೆಲುವು ಎಂಬುದು ಮತ್ತೊಂದು ವಿಶೇಷ ದಾಖಲೆ.ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಭಾರತ ಅತ್ಯದ್ಭುತ ಆರಂಭವನ್ನು ಪಡೆಯಿತು. ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಭರ್ಜರಿ ಶತಕದ ಕಾರಣದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟ ಬಂದಿತ್ತು. ಈ ಜೋಡಿ ಬೇರ್ಪಟ್ಟ ಬಳಿಕ ಮಧ್ಯಮ ಕ್ರಮಾಂಕದಿಂದ ಉತ್ತಮ ಪ್ರದರ್ಶನ ಬಾರದಿದ್ದರೂ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಅಬ್ಬರದ ಪ್ರದರ್ಶನ ನೀಡಿದರು. ಇದರ ಪರಿಣಾಮವಾಗಿ ಟೀಮ್ ಇಂಡಿಯಾ 385 ರನ್‌ಗಳ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಈ ಮೊತ್ತವನ್ನು ಬೆನ್ನಟ್ಟಲು ಆರಂಬಿಸಿದ ನ್ಯೂಜಿಲೆಂಡ್ ತಂಡದ ಪರವಾಗಿ ಡೆವೋನ್ ಕಾನ್ವೆ ಏಕಾಂಗಿ ಹೋರಾಟ ನಡೆಸಿದರಾದರೂ 90 ರನ್‌ಗಳ ಅಂತರದಿಂದ ತಂಡ ಸೋಲು ಕಾಣುವಂತಾಯಿತು.

ಡೆವೋನ್ ಕಾನ್ವೆ ಏಕಾಂಗಿ ಹೋರಾಟ, ಇನ್ನು ಟೀಮ್ ಇಂಡಿಯಾ ನೀಡಿದ ಬೃಹತ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ನ್ಯೂಜಿಲೆಂಡ್ ತಂಡ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಆರಂಭಿಕ ಆಟಗಾರ ಫಿನ್ ಅಲೆನ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತಕ್ಕೆ ಒಳಗಾಯಿತು. ಆದರೆ 2ನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್ ಹಾಗೂ ಡೆವೋನ್ ಕಾನ್ವೆ 106 ರನ್‌ಗಳ ಭರ್ಜರಿ ಜೊತೆಯಾಟ ನೀಡುವ ಮೂಲಕ ಚೇತರಿಕೆ ನೀಡಿದರು. ಬಳಿಕ ಡೆರೆಲ್ ಮಿಚೆಲ್ ಜೊತೆಗೆ ಕೂಡ ಕಾನ್ವೆ 78 ರನ್‌ಗಳ ಜೊತೆಯಾಟ ನೀಡಿದಾಗ ಟೀಮ್ ಇಂಡಿಯಾಗೆ ಈ ಪಂದ್ಯ ಕಠಿಣವಾಗಲಿದೆ ಎಂಬುದು ಸ್ಪಷ್ಟವಾಗಿತ್ತು. ಆದರೆ ಬಳಿಕ ನ್ಯೂಜಿಲೆಂಡ್ ತಂಡದ ಒಂದೊಂದೇ ವಿಕೆಟ್‌ಗಳು ಉರುಳಲು ಆರಂಭವಾಯಿತು. ಕಾನ್ವೆ ಕ್ರೀಸ್‌ನಲ್ಲಿ ಇದ್ದಷ್ಟು ಕಾಲ ಭಾರತ ತಂಡಕ್ಕೆ ಸವಾಲೊಡ್ಡುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ತುದಿಯಲ್ಲಿ ಇತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾದ ಕಾರಣ ಟೀಮ್ ಇಂಡಿಯಾ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಕಾನ್ವೆ ಭರ್ಜರಿ 138 ರನ್ ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡ ಹೋರಾಟವನ್ನು ಕೈಚೆಲ್ಲಿತು. ಅಂತಿಮವಾಗಿ ನ್ಯೂಜಿಲೆಂಡ್ 295 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ.