Padma Awards 2023 | ‘ಪದ್ಮ ವಿಭೂಷಣ’ ಎಸ್‌.ಎಂ.ಕೃಷ್ಣ , ಸುಧಾ ಮೂರ್ತಿ, ಎಸ್‌.ಎಲ್‌.ಭೈರಪ್ಪ ‘ಪದ್ಮ ಭೂಷಣ’

ಕರ್ನಾಟಕ ಎಸ್‌.ಎಂ.ಕೃಷ ಅವರಿಗೆ ಪದ್ಮ ವಿಭೂಷಣ, ಸುಧಾ ಮೂರ್ತಿ ಮತ್ತು ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಸಂದಿದೆ. ಒಟ್ಟು ಆರು ಜನರಿಗೆ ಪದ್ಮ ವಿಭೂಷಣ ದೊರೆತಿದೆ. 91 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಐವರು ಸಾಧಕರು ಸ್ಥಾನ ಪಡೆದಿದ್ದಾರೆ. ಕೊಡವ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿರುವ ರಾಣಿ ಮಾಚಯ್ಯ, ತಮಟೆ ವಾದ್ಯವನ್ನು ಪ್ರಚುರ ಪಡಿಸುತ್ತಿರುವ ಮುನಿ ವೆಂಕಟಪ್ಪ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೊಸದಿಲ್ಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಒಳಗೊಂಡ 2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಬುಧವಾರ ಪ್ರಕಟಿಸಿದೆ. ಆರು ಸಾಧಕರಿಗೆ ಪದ್ಮ ವಿಭೂಷಣ, ಒಂಭತ್ತು ಸಾಧಕರಿಗೆ ಪದ್ಮ ಭೂಷಣ ಹಾಗೂ 91 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.ಕರ್ನಾಟಕದ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರಿಗೆ ‘ಪದ್ಮ ವಿಭೂಷಣ’ ಹಾಗೂ ಸುಧಾಮೂರ್ತಿ, ಎಸ್‌.ಎಲ್‌.ಭೈರಪ್ಪ ‘ಪದ್ಮ ಭೂಷಣ’ ಪ್ರಶಸ್ತಿ ಸಂದಿದೆ. ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.ಕರ್ನಾಟಕದ ಕೊಡವ ನೃತ್ಯ (ಜನಪದ) ಕಲಾವಿದೆ ರಾಣಿ ಮಾಚಯ್ಯ ಮತ್ತು ಚಿಕ್ಕಬಳ್ಳಾಪುರದ ತಮಟೆಯ ತಂದೆ ಖ್ಯಾತಿಯ ತಮಟೆ ಕಲಾವಿದ ಮುನಿ ವೆಂಕಟಪ್ಪ ಸೇರಿ ಐದು ಜನರಿಗೆ 2023ರ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಒಟ್ಟು 91 ಮಂದಿ ಸಾಧಕರು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.‘ತಮಟೆಯ ತಂದೆ’ ಎಂದೇ ಖ್ಯಾತರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಕಲಾವಿದ ಮುನಿವೆಂಕಟಪ್ಪ, ಕೊಡವ ಸಂಸ್ಕೃತಿ ಮತ್ತು ನೃತ್ಯ ಪ್ರಚಾರದಲ್ಲಿತೊಡಗಿರುವ ರಾಣಿ ಮಾಚಯ್ಯಗೆ ಪದ್ಮಶ್ರೀ ಸಂದಿದೆ. ರಾಜ್ಯದ ಖಾದರ್‌ ವಲ್ಲಿದುಡೇಕುಲ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಮೈಸೂರಿನ ಎಸ್‌. ಸುಬ್ಬರಾವ್‌ ಅವರಿಗೆ ಪ್ರಾಚ್ಯವಸ್ತು ಸಂಶೋಧನೆಗೆ ಪದ್ಮಶ್ರೀ ದೊರೆತಿದೆ. ಬಿದ್ರಿ ಕೆತ್ತನೆಯಲ್ಲಿತೊಡಗಿರುವ ರಾಜ್ಯದ ಕಲಾವಿದ ಶಾ ರಶೀದ್‌ ಅಹ್ಮದ್‌ ಖಾದ್ರಿ ಅವರಿಗೂ ಪದ್ಮಶ್ರೀ ಸಂದಿದೆ.

ಒಟ್ಟು ಪ್ರಶಸ್ತಿಗಳು:106

ಪದ್ಮ ವಿಭೂಷಣ:06

ಪದ್ಮ ಭೂಷಣ: 09

ಪದ್ಮಶ್ರೀ: 91

ಆರು ಜನರಿಗೆ ಪದ್ಮ ವಿಭೂಷಣ:

* ಗುಜರಾತ್‌ನ ಬಾಲಕೃಷ್ಣ ದೋಶಿ (ಮರಣೋತ್ತರ)-ವಾಸ್ತುಶಿಲ್ಪಿ

* ಝಾಕಿರ್‌ ಹುಸೇನ್‌- ಕಲೆ

*ಕರ್ನಾಟಕದ ಎಸ್‌.ಎಂ.ಕೃಷ್ಣ-ಸಾರ್ವಜನಿಕ ವ್ಯವಹಾರಗಳು

*ಪಶ್ಚಿಮ ಬಂಗಾಳದ ದಿಲೀಪ್‌ ಮಹಲಾನಬಿಸ್‌ (ಮರಣೋತ್ತರ)- ಔಷಧ

*ಅಮೆರಿಕದಲ್ಲಿ ನೆಲೆಸಿರುವ ಗಣಿಶಾಸ್ತ್ರಜ್ಞ ಶ್ರೀನಿವಾಸ್‌ ವರ್ಧನ್‌ -ವಿಜ್ಞಾನ ಮತ್ತು ತಂತ್ರಜ್ಞಾನ

* ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಯಾದವ್‌ (ಮರಣೋತ್ತರ)- ಸಾರ್ವಜನಿಕ ವ್ಯವಹಾರಗಳು

ಒಆರ್‌ಎಸ್‌ನ ರೂವಾರಿ ದಿಲೀಪ್‌ ಮಹಾಲನೊಬಿಸ್‌ ಅವರಿಗೆ ಮರಣೋತ್ತರ ‘ಪದ್ಮ ವಿಭೂಷಣ’ ಗೌರವ ಸಂದಿದೆ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

9 ಜನ ಸಾಧಕರಿಗೆ ಪದ್ಮ ಭೂಷಣ:

* ಕರ್ನಾಟಕ ಎಸ್‌.ಎಲ್‌.ಭೈರಪ್ಪ-ಸಾಹಿತ್ಯ ಮತ್ತು ಶಿಕ್ಷಣ

*ಕುಮಾರ ಮಂಗಳಂ ಬಿರ್ಲಾ- ವ್ಯಾಪಾರ ಮತ್ತು ಕೈಗಾರಿಕೆ

*ದೀಪಕ್‌ ಧಾರ್‌- ವಿಜ್ಞಾನ ಮತ್ತು ತಂತ್ರಜ್ಞಾನ

*ವಾಣಿ ಜಯರಾಂ- ಕಲೆ

* ಸ್ವಾಮಿ ಚಿನ್ನ ಜೀಯಾರ್‌- ಅಧ್ಯಾತ್ಮ

* ಸುಮನ್‌ ಕಲ್ಯಾಣ್‌ಪುರ್‌- ಕಲೆ

* ಕಪಿಲ್‌ ಕಪೂರ್‌- ಸಾಹಿತ್ಯ ಮತ್ತು ಶಿಕ್ಷಣ

* ಕರ್ನಾಟಕದ ಸುಧಾ ಮೂರ್ತಿ- ಸಾಮಾಜ ಸೇವೆ

* ಕಮಲೇಶ್‌ ಡಿ ಪಟೇಲ್‌- ಅಧ್ಯಾತ್ಮ