ಕನ್ನಡದ ಹಿರಿಯ ನಟ ಮನ್‌ದೀಪ್ ರಾಯ್ ನಿಧನ

ಬೆಂಗಳೂರು : ನೂರಾರು ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ದೀಪ್ ರಾಯ್ ವಿಧಿವಶರಾದರು. ಭಾನುವಾರ ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಹೃದಯಾಘಾತದಿಂದಾಗಿ ಮನ್‌ದೀಪ್ ರಾಯ್ ಭಾನುವಾರ ಮುಂಜಾನೆ 1.45ರ ಸುಮಾರಿಗೆ ನಿಧನ ಹೊಂದಿದ್ದಾರೆ. ಈ ಕುರಿತು ಅವರ ಪುತ್ರಿ ಅಕ್ಷತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಬೆಂಗಳೂರಿನ ಕಾವಲ್ ಭೈರಸಂದ್ರದ ನಿವಾಸದಲ್ಲಿ ಮನ್‌ದೀಪ್ ರಾಯ್ ಕೊನೆಯುಸಿರೆಳೆದರು. ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

75 ವರ್ಷದ ಮನ್‌ದೀಪ್ ರಾಯ್‌ಗೆ 2022ರ ಡಿಸೆಂಬರ್‌ನಲ್ಲಿಯೂ ಹೃದಯಾಘಾತವಾಗಿತ್ತು. ಆಗ ಶೇಷಾದ್ರಿಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಮನ್‌ದೀಪ್ ರಾಯ್ 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ದಿ. ಶಂಕರನಾಗ್ ಒಡನಾಡಿಯಾಗಿದ್ದರು. ಶಂಕರನಾಗ್,‌ ಅನಂತ್ ನಾಗ್, ರಾಜ್‌ ಕುಮಾರ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದರು.ಆಕಸ್ಮಿಕ, ಮಿಂಚಿನ ಓಟ, ಅಪೂರ್ವ ಸಂಗಮ, ಚಲಿಸುವ ಮೋಡಗಳು, ದೀಪಾವಳಿ, ಅಗ್ನಿ ಐಪಿಎಸ್, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಮನ್‌ದೀಪ್ ರಾಯ್ ಬಣ್ಣ ಹಚ್ಚಿದ್ದರು.

ಇಂಜಿನಿಯರಿಂಗ್ ಪದವಿ ಪಡೆದಿದ್ದ ಮನ್‌ದೀಪ್ ರಾಯ್ ಐಬಿಎಂ ಮತ್ತು ಟಿಸಿಎಸ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆಗ ಶಂಕರ್‌ನಾಗ್‌ರ ಮಿಂಚಿನ ಓಟ ಸಿನಿಮಾದಲ್ಲಿ ನಟಿಸಿದ್ದರು.

ಮನ್‌ದೀಪ್‌ ರಾಯ್ ಮೂಲತಃ ಮುಂಬೈನವರು. 9ನೇ ವಯಸ್ಸಿನಲ್ಲಿಯೇ ರಂಗಭೂಮಿ ಕಡೆ ಒಲವು ಬೆಳೆಸಿಕೊಂಡರು. ಅಲ್ಲಿ ಪರಿಚಯವಾದ ಶಂಕರನಾಗ್‌ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.