ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ಪೈಲೆಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ ಹುತಾತ್ಮರಾಗಿದ್ದಾರೆ.
ಗ್ವಾಲಿಯರ್ ಬಳಿ ನಡೆದ ಯುದ್ಧ ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲೆಟ್ ಬೆಳಗಾವಿ ಮೂಲದವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುತಾತ್ಮ ಯೋಧನ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಮೃತಪಟ್ಟವರನ್ನು ಪೈಲೆಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ (34) ಎಂದು ಗುರುತಿಸಲಾಗಿದೆ. ಶನಿವಾರ ಸುಖೋಯ್ 30 ಎಂಕೆಐ ಹಾಗೂ ಮಿರಾಜ್-200 ಯುದ್ಧ ವಿಮಾನಗಳು ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ ತಂದೆ, ತಾಯಿ, ಪತ್ನಿ ಮೀಮಾಂಶ, ಮೂರು ವರ್ಷದ ಪುತ್ರಿ, ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ. ತಂದೆ ರೇವಣಸಿದ್ಧಪ್ಪ, ತಾಯಿ ಸಾವಿತ್ರಿ ಬೆಳಗಾವಿ ನಗರದಲ್ಲಿಯೇ ವಾಸವಾಗಿದ್ದಾರೆ.ಭಾನುವಾರ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ‘ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತ ರಾವ್ ಸಾರಥಿ ಯವರು ಗ್ವಾಲಿಯರ್ ನಲ್ಲಿ ತರಬೇತಿ ವೇಳೆಯಲ್ಲಿ ನಡೆದ ಯುದ್ಧ ವಿಮಾನದ ಅಪಘಾತದಲ್ಲಿ ಅಸುನೀಗಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅಗಲಿದ ವೀರಯೋಧನಿಗೆ ನನ್ನ ನಮನಗಳು. ಹುತಾತ್ಮ ಯೋಧನ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ’ ಎಂದು ಸಂತಾಪ ಸೂಚಿಸಿದರು.
ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ 1987ರಲ್ಲಿ ಗಣೇಶಪುರದಲ್ಲಿ ಜನಿಸಿದರು. ನಗರದ ಕೇಂದ್ರಿಯ ವಿದ್ಯಾಲಯ-2ರಲ್ಲಿ ಶಿಕ್ಷಣ ಪೂರೈಸಿದ್ದರು. ಪೈಲೆಟ್ ಆದ ಬಳಿಕ ಪತ್ನಿ, ಮಕ್ಕಳ ಜೊತೆ ಗ್ವಾಲಿಯರ್‌ನಲ್ಲಿ ವಾಸವಾಗಿದ್ದರು.2009ರಿಂದ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಂದೆ ರೇವಣಸಿದ್ಧಪ್ಪ ಕೂಡಾ ಸೇನೆಯಲ್ಲಿದ್ದರು. ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರವೀಣ್ ಸಹ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.
ಶನಿವಾರ ಎರಡು ವಿಮಾನಗಳು ತರಬೇತಿ ಹಾರಾಟ ನಡೆಸುತ್ತಿದ್ದಾಗ ಪರಸ್ಪರ ಡಿಕ್ಕಿಯಾಗಿದ್ದವು.
ವಿಶೇಷ ವಿಮಾನದಲ್ಲಿ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ ಪಾರ್ಥಿವ ಶರೀರವನ್ನು ಭಾನುವಾರ ಬೆಳಗಾವಿಗೆ ತರಲಾಗುತ್ತದೆ.
ಎರಡು ವಿಮಾನಗಳು ಪತನ; ಭಾರತೀಯ ವಾಯುಪಡೆಯ ಎರಡು ವಿಮಾನಗಳು ಶನಿವಾರ ಗ್ವಾಲಿಯರ್ ಸಮೀಪ ಪತನಗೊಂಡಿದ್ದವು. ಸುಖೋಯ್-30ಎಂಕೆಐ ಹಾಗೂ ಮಿರಾಜ್-2000 ಯುದ್ಧ ವಿಮಾನಗಳು ಗ್ವಾಲಿಯರ್‌ನಿಂದ ಪ್ರತಿನಿತ್ಯದ ತರಬೇತಿಗಾಗಿ ಟೇಕಾಫ್ ಆಗಿದ್ದವು.ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ ಮಿರಾಜ್ ಯುದ್ಧ ವಿಮಾನದ ಪೈಲೆಟ್ ಆಗಿದ್ದರು. ಸುಖೋಯ್ ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲೆಟ್‌ಗಳು ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಹಾರಾಟದ ವೇಳೆ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಆದರೆ ಭಾರತೀಯ ವಾಯುಪಡೆ ಇದನ್ನೂ ಇನ್ನೂ ಖಚಿತಪಡಿಸಿಲ್ಲ. ಅಪಘಾತದ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ.ಮೊರೆನಾ ಜಿಲ್ಲಾಧಿಕಾರಿ ಘಟನೆ ಕುರಿತು ಮಾಹಿತಿ ನೀಡಿದ್ದು ಎರಡು ವಿಮಾನಗಳ ಅವಶೇಷಗಳು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪಹಾರ್‌ಗಢ್ ಪ್ರದೇಶ ಮತ್ತು ರಾಜಸ್ಥಾನದ ಭರತ್‌ಪುರ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಹೇಳಿದ್ದಾರೆ.ಭಾರತೀಯ ವಾಯುಪಡೆ ಗ್ವಾಲಿಯರ್‌ನಲ್ಲಿ ತನ್ನ ನೆಲೆ ಹೊಂದಿದೆ. ಸುಖೋಯ್ ಮತ್ತು ಮಿರಾಜ್ ಯುದ್ಧ ವಿಮಾನಗಳ ತಂಡ ಈ ವಾಯುನೆಲೆಯಲ್ಲಿದೆ. ಪ್ರತಿನಿತ್ಯ ಇಲ್ಲಿ ಯುದ್ಧ ವಿಮಾನಗಳು ತರಬೇತಿಗಾಗಿ ಹಾರಾಟ ನಡೆಸುತ್ತಿರುತ್ತವೆ.ಆಗಸದಲ್ಲಿಯೇ ವಿಮಾನಗಳು ಡಿಕ್ಕಿಯಾಗಿರುವ ಸಾಧ್ಯತೆ ಇದೆ. ಮೊದಲು ಮೊರೆನಾ ಸಮೀಪ ಮಿರಾಜ್ ಯುದ್ಧ ವಿಮಾನ ಪತನಗೊಂಡಿದೆ. ಬಳಿಕ ಭರತ್‌ಪುರ ಸಮೀಪ ಸುಖೋಯ್ ವಿಮಾನ ಪತನಗೊಂಡಿದೆ.