ಎಂಎಸ್‌ಪಿ: 54 ಸಾವಿರ ಟನ್‌ ಕೊಬ್ಬರಿ ಖರೀದಿಗೆ ಆದೇಶ

ಬೆಂಗಳೂರು: ತೆಂಗು ಬೆಳೆಯುವ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಅಡಿಯಲ್ಲಿ ಪ್ರತಿ ಟನ್‌ಗೆ ₹11,750ರ ದರದಲ್ಲಿ 54,750 ಟನ್‌ ಉಂಡೆ ಕೊಬ್ಬರಿ ಖರೀದಿಗೆ ಸಹಕಾರ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೊಬ್ಬರಿ ಖರೀದಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯಾಗಿ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳ (ನಾಫೆಡ್‌) ಮತ್ತು ರಾಜ್ಯದ ಖರೀದಿ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ವರ್ಷ ಎಂಎಸ್‌ಪಿ ಅಡಿಯಲ್ಲಿ ಖರೀದಿಸುವ ಪ್ರತಿ ಟನ್‌ ಕೊಬ್ಬರಿಗೆ ₹11,750 ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ರಾಜ್ಯದಿಂದ 54,750 ಟನ್‌ ಖರೀದಿಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ.45 ದಿನಗಳವರೆಗೆ ರೈತರ ನೋಂದಣಿಗೆ ಅವಕಾಶವಿದ್ದು, ಆರು ತಿಂಗಳವರೆಗೆ ಖರೀದಿ ನಡೆಯಲಿದೆ. ನೋಂದಣಿ ಕಾರ್ಯದ ಜತೆಯಲ್ಲೇ ಖರೀದಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಸೂಚಿಸಲಾಗಿದೆ. ಪ್ರತಿ ಎಕರೆಗೆ ಆರು ಕ್ವಿಂಟಲ್‌ನಂತೆ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಉಂಡೆ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.ಎಂಎಸ್‌ಪಿ ಅಡಿಯಲ್ಲಿ ಭತ್ತ ಮತ್ತು ರಾಗಿ ಖರೀದಿಗೆ ‘ಫ್ರೂಟ್ಸ್‌’ ತಂತ್ರಾಂಶದಲ್ಲಿನ ಮಾಹಿತಿಯನ್ನು ಬಳಸಿಕೊಳ್ಳುತ್ತಿರುವ ಮಾದರಿಯಲ್ಲೇ ಕೊಬ್ಬರಿ ಖರೀದಿಗೂ ಬಳಕೆ ಮಾಡಬೇಕು. ನಾಫೆಡ್‌ ಸಂಸ್ಥೆಯು ರೈತರಿಗೆ ಅನುಕೂಲವಾಗುವಂತೆ ತಾಂತ್ರಿಕ ಹಾಗೂ ವೈಜ್ಞಾನಿಕವಾದ ಸೌಲಭ್ಯಗಳುಳ್ಳು ಗೋದಾಮುಗಳನ್ನು ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಹಾಗೂ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸೊಸೈಟಿಗಳನ್ನು (ಟಿಎಪಿಸಿಎಂಎಸ್‌) ಬಳಸಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.

ಖರೀದಿ ಕೇಂದ್ರಗಳಲ್ಲೇ ಕೊಬ್ಬರಿಯ ಗುಣಮಟ್ಟ ಪರೀಕ್ಷಿಸಿ, ಖಾತರಿಪಡಿಸಿಕೊಳ್ಳಬೇಕು. ಜಿಲ್ಲಾ ಮಟ್ಟದ ಕಾರ್ಯಪಡೆಯು ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ನಾಫೆಡ್‌ ಜತೆ ಸಮಾಲೋಚಿಸಿ ಖರೀದಿ ಕೇಂದ್ರಗಳ ಸಂಖ್ಯೆಯನ್ನು ನಿರ್ಧರಿಸಬೇಕು. ವರ್ತಕರಿಂದ ಕೊಬ್ಬರಿ ಖರೀದಿಸದಂತೆ ಹಾಗೂ ಖರೀದಿ ಪ್ರಕ್ರಿಯೆಯ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.