ಫೆ.6 ರಂದು ಮತ್ತೆ ರಾಜ್ಯಕ್ಕೆ ಮೋದಿ – ಎಲ್ಲಿ ಏನು ಕಾರ್ಯಕ್ರಮ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ ತಿಂಗಳಿನಲ್ಲಿ ಮೂರು ಬಾರಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.ಈ ಮೊದಲು ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಪ್ರಚಾರ ಭಾಷಣಕ್ಕೆ ಮೋದಿ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕರ್ನಾಟಕವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ತನ್ನ ತಂತ್ರವನ್ನು ಬದಲಾಯಿಸಿದ್ದು ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲೇ ಮೋದಿ ಅವರ ರಾಜ್ಯ ಪ್ರವಾಸವನ್ನು ಫಿಕ್ಸ್‌ ಮಾಡುತ್ತಿದೆ.

ಫೆ.6ರಂದು ಮೋದಿ ಅವರು ಬೆಂಗಳೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.ಅಂದು ಬೆಳಗ್ಗೆ 8:20ರ ಸುಮಾರಿಗೆ ದೆಹಲಿಯಿಂದ ಹೊರಡುವ ಮೋದಿ ಅವರು ವಿಶೇಷ ವಿಮಾನದ ಮೂಲಕ 11 ಗಂಟೆಗೆ ಬೆಂಗಳೂರಿಗೆ ಬರಲಿದ್ದಾರೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ 11:30ರ ಸುಮಾರಿಗೆ ನಗರದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಆಯೋಜನೆಗೊಂಡಿರುವ ʼಭಾರತ ಇಂಧನ ಸಪ್ತಾಹʼ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಈ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ತುಮಕೂರಿನ ಗುಬ್ಬಿಯ ಬಿದರೇಹಳ್ಳ ಕಾವಲ್‌ಗೆ ತೆರಳಿ ಎಚ್‌ಎಎಲ್‌ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಸಂಜೆ ಬೆಂಗಳೂರಿಗೆ ಮರಳಿ ದೆಹಲಿಗೆ ವಾಪಸ್‌ ಆಗಲಿದ್ದಾರೆ.

ಎರಡನೇ ವಾರದಲ್ಲಿ ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿರುವ ʼಏರೋ ಇಂಡಿಯಾʼ ಕಾರ್ಯಕ್ರಮಕ್ಕೂ ಮೋದಿ ಆಗಮಿಸಲಿದ್ದಾರೆ.ಫೆ.27 ರಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬವಿದ್ದು, ಅಂದೇ ಶಿವಮೊಗ್ಗ ವಿಮಾನ ನಿಲ್ದಾಣ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಯಡಿಯೂರಪ್ಪ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸುವುದು ಬಹುತೇಕ ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ.