ಅಹಮದಾಬಾದ್: ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಮೂರೂ ಮಾದರಿಯಲ್ಲಿ ಶತಕ ಸಿಡಿಸಿದ ಬ್ಯಾಟರ್‌ಗಳ ಸಾಲಿಗೆ ಸೇರಿದರು. ಜೊತೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಗಿಲ್ ಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಕೇವಲ 66 ರನ್‌ಗಳಿಗೆ ಆಲೌಟ್ ಆಗಿ, 168 ರನ್ ಅಂತರದ ಸೋಲು ಅನುಭವಿಸಿತು.
ಭಾರತದ ಇನಿಂಗ್ಸ್ ವೇಳೆ ಗಿಲ್ ಜೊತೆ ಬ್ಯಾಟಿಂಗ್ ಆರಂಭಿಸಿದ ಇಶಾನ್ ಕಿಶನ್, ಕೇವಲ 1 ರನ್ ಗಳಿಸಿ ಔಟಾದರು. ಬಳಿಕ ರಾಹುಲ್ ತ್ರಿಪಾಠಿ (44) ಜೊತೆಯಾದ ಗಿಲ್, ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 80 ರನ್ ಕಲೆಹಾಕಿ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಸೂರ್ಯಕುಮಾರ್ ಯಾದವ್ (24) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (30) ಉತ್ತಮ ನೆರವು ನೀಡಿದರು.63 ಎಸೆತಗಳನ್ನು ಎದುರಿಸಿದ ಗಿಲ್, 200ರ ಸ್ಟ್ರೈಕ್‌ರೇಟ್‌ನಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 126 ರನ್ ಕಲೆ ಹಾಕಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟರ್‌ವೊಬ್ಬರು ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಕಳೆದ ವರ್ಷ (2022ರ ಸೆಪ್ಟೆಂಬರ್‌ನಲ್ಲಿ) ಅಫ್ಗಾನಿಸ್ತಾನ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಗಳಿಸಿದ್ದು, ಈ ಹಿಂದಿನ ದಾಖಲೆಯಾಗಿತ್ತು. ಅದಕ್ಕೂ ಮೊದಲು ರೋಹಿತ್ ಶರ್ಮಾ 2017ರಲ್ಲಿ ಶ್ರೀಲಂಕಾ ವಿರುದ್ಧ ಗಳಿಸಿದ್ದ 43 ಎಸೆತಗಳಲ್ಲಿ 118 ರನ್ ಅತ್ಯಧಿಕ ಎನಿಸಿತ್ತು. ಆ ಪಂದ್ಯದಲ್ಲಿ ಅವರು ಕೇವಲ 35 ಎಸೆತಗಳಲ್ಲೇ ಶತಕ ಸಿಡಿರುವುದು ದಾಖಲೆಯಾಗಿದೆ.ಒಟ್ಟಾರೆಯಾಗಿ ಈ ಮಾದರಿಯಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ದಾಖಲೆ ಇರುವುದು ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಹೆಸರಿನಲ್ಲಿ. ಅವರು 2018ರಲ್ಲಿ ಜಿಂಬಾಬ್ವೆ ವಿರುದ್ಧ 172 ರನ್ ಗಳಿಸಿದ್ದರು.ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ರನ್
* ಶುಭಮನ್ ಗಿಲ್: ನ್ಯೂಜಿಲೆಂಡ್ ವಿರುದ್ಧ 126 ರನ್ (2023)
* ವಿರಾಟ್ ಕೊಹ್ಲಿ: ಅಫ್ಗಾನಿಸ್ತಾನ ವಿರುದ್ಧ 122 ರನ್ (2022)
* ರೋಹಿತ್ ಶರ್ಮಾ: ಶ್ರೀಲಂಕಾ ವಿರುದ್ಧ 118 ರನ್ (2017)
* ಸೂರ್ಯಕುಮಾರ್ ಯಾದವ್: ಇಂಗ್ಲೆಂಡ್ ವಿರುದ್ಧ 117 ರನ್ (2022)
* ಸೂರ್ಯಕುಮಾರ್ ಯಾದವ್: ಶ್ರೀಲಂಕಾ ವಿರುದ್ಧ 112 ರನ್ (2023)
ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಬ್ಯಾಟರ್‌ಗಳು
* ಸುರೇಶ್ ರೈನಾ
* ಕೆ.ಎಲ್ ರಾಹುಲ್
* ರೋಹಿತ್ ಶರ್ಮಾ
* ವಿರಾಟ್ ಕೊಹ್ಲಿ
* ಶುಭಮನ್ ಗಿಲ್