ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಖುಷಿ ಸುದ್ದಿ!

ಬೆಂಗಳೂರು : ಬೆಂಗಳೂರಿನಲ್ಲಿ ವಾಹನ ಚಾಲಕರ ಸಂಚಾರಿ ಉಲ್ಲಂಘನೆಯ ದಂಡದ ಪಟ್ಟಿ ಇದ್ದೇ ಇರುತ್ತದೆ. ಎಷ್ಟೇ ಸರಿಯಾಗಿ ಚಾಲನೆ ಮಾಡಿದ್ರೂ, ಕೆಲವೊಮ್ಮೆ ನಿಷ್ಕಾಳಜಿಯಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುತ್ತಾರೆ.ಈ ಸಂಚಾರಿ ನಿಯಮ ಉಲ್ಲಂಘನೆ ಟ್ರಾಫಿಕ್ ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗಿ, ನಿಮ್ಮ ಮೊಬೈಲ್ಗೆ ದಂಡದ ರಶೀದಿ ಬಂದಿರುತ್ತದೆ.ಬಹುತೇಕರು ನಾಳೆ ದಂಡ ಪಾವತಿ ಮಾಡಿದ್ರೆ ಆಯ್ತು ಅಂತ ನಿರ್ಲಕ್ಷ್ಯ ತೋರಿರುತ್ತಾರೆ. ಪ್ರತಿ ಟ್ರಾಫಿಕ್ ರೂಲ್ಸ್​ ಬ್ರೇಕ್​ ಮಾಡಿದಾಗಲೂ ದಂಡ ಬೆಳೆಯುತ್ತಲೇ ಹೋಗುತ್ತದೆ.

ಇದೀಗ ದಂಡದ ಮೊತ್ತ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರ ನೀಡಿದ ಅವಧಿಯೊಳಗೆ ದಂಡ ಪಾವತಿಸೋರಿಗೆ ರಿಯಾಯ್ತಿ ನೀಡುತ್ತಿದೆ.ಹೈಕೋರ್ಟ್ ನ್ಯಾ ಬಿ.ವೀರಪ್ಪ ಅವರ ಪ್ರಸ್ತಾವನೆ ಮೇರೆಗೆ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಸರ್ಕಾರದ ಆದೇಶ ಹೊರಡಿಸಿದೆ.

ಕಾನೂನು‌ ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ನ್ಯಾ ಬಿ.ವೀರಪ್ಪ ಅವರು ಸರ್ಕಾರಕ್ಕೆ ಸಂಚಾರಿ ನಿಯಮ ಉಲ್ಲಂಘನೆಯ ದಂಡದಲ್ಲಿ ಶೇ.50 ರಷ್ಟು ರಿಯಾಯ್ತಿ ನೀಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದರು.ಫೆ.11ರವರೆಗೆ ಮಾತ್ರ ಈ ವಿನಾಯಿತಿ ‌ನೀಡಿ‌ ಆದೇಶ ನೀಡಲಾಗಿದೆ. ಈ ಸಂಬಂಧ ಸಾರಿಗೆ ಇಲಾಖೆ‌ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​. ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಆದೇಶ ರಾಜ್ಯಾದ್ಯಂತ ಅನ್ವಯವಾಗಲಿದೆ.ರಾಜ್ಯಾದ್ಯಂತ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್​ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯ್ತಿ ನೀಡಿ ಎಂದು ಆದೇಶ ಹೊರಡಿಸಲಾಗಿದೆ.