ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಅಪರೂಪದ ಬಾಂಬೆ ಫಿನೋಟೈಪ್ ರಕ್ತದ ಗುಂಪು ಹೊಂದಿರುವ ಗರ್ಭಿಣಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ,
ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.‘ಒ’ ನೆಗೆಟಿವ್ ರಕ್ತದ ಗುಂಪು ಹಾಗೂ ಆ್ಯಂಟಿ ಬಾಡಿ ಇರುವ ಕಾರಣ ನೀಡಿ ಈಚೆಗೆ ಗರ್ಭಿಣಿಯೊಬ್ಬರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕೂಡಲೇ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಮಹಿಳೆಯ ರಕ್ತವನ್ನು ಪರೀಕ್ಷೆಗೊಳಪಡಿಸಿದಾಗ ದೇಶದಲ್ಲಿಯೇ ಅತಿ ಅಪರೂಪದ ‘ಬಾಂಬೆ ನೆಗೆಟಿವ್’ ರಕ್ತದ ಗುಂಪು ಇರುವುದು ದೃಢಪಟ್ಟಿತು.ಇಂತಹ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಆ್ಯಂಟಿ ‘ಡಿ’ ಆ್ಯಂಟಿ ಬಾಡಿ ಇರುವಿಕೆ ಪತ್ತೆ ಹಚ್ಚುವುದು ಬಹಳ ಕಷ್ಟಕರವಾಗಿತ್ತು. ಸವಾಲನ್ನು ಸ್ವೀಕರಿಸಿದ ವೈದ್ಯರು ಮಹಿಳೆಯ ರಕ್ತವನ್ನು ಉನ್ನತ ಮಟ್ಟದ ಇಮ್ಮುನೊ ಹೆಮಟಾಲೋಜಿ ಪರೀಕ್ಷೆಗೊಳಪಡಿಸಿದರು. ಈ ಸಂದರ್ಭ ಆ್ಯಂಟಿ ‘ಡಿ’ ಆ್ಯಂಟಿಬಾಡಿ ಇಲ್ಲದಿರುವುದು ಪರೀಕ್ಷಾ ವರದಿಯಲ್ಲಿ ದೃಢಪಟ್ಟಿತು ಎಂದು ಆಸ್ಪತ್ರೆಯ ರಕ್ತ ಕೇಂದ್ರದ ಮುಖ್ಯಸ್ಥೆ ಡಾ.ಶಮಿ ಶಾಸ್ತ್ರಿ ಚಿಕಿತ್ಸೆಯ ವಿವರ ನೀಡಿದರು.
‘ದೇಶದಲ್ಲಿಯೇ ಬಾಂಬೆ ನೆಗೆಟಿವ್ ಅಪರೂಪದ ರಕ್ತದ ಗುಂಪಾಗಿದ್ದು ಈ ರಕ್ತದ ಗುಂಪು ಹೊಂದಿರುವವರುರಿಗೆ ತುರ್ತು ಸಂದರ್ಭಗಳಲ್ಲಿ ರಕ್ತ ಹೊಂದಿಸುವುದು ದೊಡ್ಡ ಸವಾಲು. ದೇಶದಲ್ಲಿ ಬಾಂಬೆ ನೆಗೆಟಿವ್ ರಕ್ತದ ಗುಂಪು ಹೊಂದಿರುವ ಕೆಲವೇ ದಾನಿಗಳು ಮಾತ್ರ ಇರುವುದು .ಗರ್ಭಿಣಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದಾಗ ರಕ್ತ ಹೊಂದಿಸುವುದು, ನಿರ್ವಹಣೆ ಮಾಡುವುದು ಸವಾಲಾಗಿ ಪರಿಣಮಿಸಿತ್ತು. ಈ ಸಂದರ್ಭ ಮಹಿಳೆಯ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಸ್ವಯಂ ರಕ್ತ ಸಂಗ್ರಹಣೆ ಪ್ರಕ್ರಿಯೆಗೆ ವೈದ್ಯರು ಆದ್ಯತೆ ನೀಡಿದರು ಎಂದು ಶಮಿ ಶಾಸ್ತ್ರಿ ತಿಳಿಸಿದರು.
ಚಿಕಿತ್ಸಾ ಕ್ರಮ ಹೇಗೆ: ಗರ್ಭಿಣಿ ಮಹಿಳೆಗೆ ಎರಿಥ್ರೋಪೊಯೆಟಿನ್ ಚುಚ್ಚುಮದ್ದು ಹಾಗೂ ಕಬ್ಬಿಣದ ಅಂಶಗಳಿರುವ ಚುಚ್ಚುಮದ್ದುಗಳನ್ನು ಪ್ರಸವ ಪೂರ್ವವಾಗಿ ನೀಡಲಾಯಿತು. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಈ ಪ್ರಕ್ರಿಯೆ ಬಹಳ ಮುಖ್ಯವಾದುದು.ಭ್ರೂಣಕ್ಕೆ ರಕ್ತದ ಪೂರೈಕೆ ಕಡಿಮೆ ಇದ್ದ ಕಾರಣ ತಾಯಿಯ ಆರೈಕೆ ಮಾಡುವುದು ಜಟಿಲವಾಗಿತ್ತು. ಭ್ರೂಣ ಕೂಡ ರಕ್ತಹೀನತೆಯಿಂದ ಬಳಲುವ ಅಪಾಯ ಎದುರಾಗಿತ್ತು. ಇದನ್ನು ಮನಗಂಡು ಫೀಟಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ.ಅಖಿಲಾ ವಾಸುದೇವ್ ಭ್ರೂಣದ ಮೇಲೆ ನಿರಂತರ ನಿಗಾ ವಹಿಸಿ ಪ್ರಸವಪೂರ್ವ ಆರೈಕೆ ಮಾಡಿ ಯಶಸ್ವಿಯಾಗಿ ರಕ್ತ ರಹಿತ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಅಪರೂಪದ ರಕ್ತದ ಗುಂಪನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿ ಹಾಗೂ ಮಗುವನ್ನು ಉಳಿಸಿದ ವೈದ್ಯರ ತಂಡಕ್ಕೆ ಕಸ್ತೂರಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ ವೇಣುಗೋಪಾಲ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.