ತುಮಕೂರಿನ HAL ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರ – ಏನಿದರ ವೈಶಿಷ್ಟ್ಯ?

ಗುಬ್ಬಿ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಿರ್ಮಾಣವಾಗಿರುವ ಹೆಚ್‍ಎಎಲ್‍ನ (HAL) ಹೆಲಿಕಾಪ್ಟರ್ ಕಾರ್ಖಾನೆ ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರವಾಗಿದ್ದು, ಫೆಬ್ರವರಿ 6 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ರಕ್ಷಣಾ ಇಲಾಖೆ ಹೇಳಿದೆ.

ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆ ಹಿನ್ನೆಲೆ ಅದರ ವೈಶಿಷ್ಟ್ಯಗಳ ಬಗ್ಗೆ ಶನಿವಾರ ಮಾಹಿತಿ ನೀಡಿದೆ. 615 ಎಕರೆ ಪ್ರದೇಶದಲ್ಲಿ ಹರಡಿರುವ ಗ್ರೀನ್‍ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆ ಎಲ್ಲಾ ಹೆಲಿಕಾಪ್ಟರ್‌ಗಳ ಸಮಸ್ಯೆಗಳ ಪರಿಹಾರ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರ್ಖಾನೆಯಲ್ಲಿ ಆರಂಭದಲ್ಲಿ ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳು, 3-ಟನ್ ವರ್ಗ, ಏಕ ಎಂಜಿನ್ ವಿವಿಧೋದ್ದೇಶ ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲಾಗುತ್ತದೆ.ಈ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು 30 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಹಂತ ಹಂತವಾಗಿ ವರ್ಷಕ್ಕೆ 60 ಮತ್ತು ನಂತರ 90ಕ್ಕೆ ಹೆಚ್ಚಿಸುವ ಚಿಂತನೆ ಮಾಡಲಾಗಿದೆ. 3-15 ಟನ್‍ಗಳ ವ್ಯಾಪ್ತಿಯಲ್ಲಿ 1,000 ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು HAL ಚಿಂತಿಸಿದ್ದು, ಇದರಿಂದ ಮುಂದಿನ 20 ವರ್ಷಗಳ ಅವಧಿಯಲ್ಲಿ ಒಟ್ಟು 4 ಲಕ್ಷ ಕೋಟಿ ರೂಪಾಯಿ ವ್ಯವಹಾರವಾಗುವ ನಿರೀಕ್ಷೆ ಇದೆ.

ಕಾರ್ಖಾನೆ ಆರಂಭದಿಂದ ತುಮಕೂರು ಸೇರಿದಂತೆ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ದೊರೆಯಲಿದೆ. ಸಿಎಸ್‍ಆರ್ (CSR) ಚಟುವಟಿಕೆಗಳಿಂದ ತುಮಕೂರು ನಗರ ಅಭಿವೃದ್ಧಿಯಾಗಲಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಯಾವ ಹೆಲಿಕಾಪ್ಟರ್‌ ತಯಾರಾಗುತ್ತೆ?

ಮೇಕ್‌ ಇನ್‌ ಇಂಡಿಯಾಗೆ ಒತ್ತು ನೀಡಲು ಸಂಪೂರ್ಣ ಸ್ವದೇಶದಲ್ಲೇ ಸೇನೆಗೆ ಅಗತ್ಯ ಇರುವ ಶಸ್ತ್ರ ಹಾಗೂ ವಾಹನಗಳನ್ನು ತಯಾರಿಸುವ ದೂರ ದೃಷ್ಟಿ ಹಿನ್ನೆಯಲ್ಲಿ ಮೋದಿಯವರೇ 2016 ರಲ್ಲಿ ಈ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದರು. 2018 ರಲ್ಲಿ ಪ್ರಯೋಗಾರ್ಥವಾಗಿ ಹೆಲಿಕಾಪ್ಟರ್ ಹಾರಾಟ ಮಾಡಿತ್ತು. ಈ ಘಟಕ ಮೊದಲೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕೋವಿಡ್‌ (Covid-19) ಇತ್ಯಾದಿ ಕಾರಣಗಳಿಂದ ತಡವಾಗಿ ಲೋಕಾರ್ಪಣೆಯಾಗುತ್ತಿದೆ.ಒಟ್ಟು 616 ಎಕರೆ ಭೂ ಪ್ರದೇಶದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಲಘು ಯುದ್ದ ಹೆಲಿಕಾಪ್ಟರ್‌ಗಳು ಇಲ್ಲಿ ತಯಾರಾಗಲಿದೆ. ಈ ಘಟಕದಲ್ಲಿ ತಯಾರಾದ 5 ರಿಂದ 6 ಮಂದಿ ಕುಳಿತುಕೊಳ್ಳುವ ಕಾಪ್ಟರ್‌ಗಳು ಭೂ ಸೇನೆ, ವಾಯುಸೇನೆಗೆ ಬಳಕೆಯಾಗಲಿದೆ. ಒಟ್ಟು 5 ಸಾವಿರ ಜನರಿಗೆ ಈ ಘಟಕದ ಮೂಲಕ ಉದ್ಯೋಗ ಲಭಿಸಲಿದೆ.

ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ಕನಸಿನ ಕೂಸು ಎಂದೇ ಬಿಂಬಿತವಾಗಿರುವ HAL ಘಟಕದ 614 ಎಕರೆ ಜಾಗದ ಪೈಕಿ 529 ಎಕರೆ ಜಾಗದಲ್ಲಿ ಹೆಲಿಕಾಪ್ಟರ್‌ ಬಿಡಿ ಭಾಗ ತಯಾರಿಸುವ, ಜೋಡಿಸುವ ಕಟ್ಟಡಗಳ ಘಟಕಗಳ ನಿರ್ಮಾಣವಾಗಿದೆ. ಈ ಘಟಕದಲ್ಲಿ ರನ್‌ವೇ, ಆಸ್ಪತ್ರೆ, ಆಡಳಿತ ವಿಭಾಗ ಸೇರಿದಂತೆ ಇನ್ನಿತರೆ ಕಚೇರಿಗಳನ್ನು ಒಳಗೊಂಡಿದೆ.

ಈ ಘಟಕ ಸ್ಥಾಪನೆ ತುಮಕೂರು ಜಿಲ್ಲೆಯ ಪಾಲಿಗೆ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.