ಕಲಬುರಗಿಯಲ್ಲಿ ತಲವಾರ್ ಹಿಡಿದು ಜನರಿಗೆ ಬೆದರಿಕೆ, ದುಷ್ಕರ್ಮಿ ಮೇಲೆ ಶೂಟೌಟ್

ಮಾರಕಾಸ್ತ್ರಗಳನ್ನು ಹಿಡಿದು ಜನಬಿಡ ಪ್ರದೇಶಕ್ಕೆ ಬಂದ ವ್ಯಕ್ತಿಯೊಬ್ಬ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿನೀಡಿದ್ದಾರೆ.

ಗುಂಡೇಟು ತಿಂದ ಆರೋಪಿ ಅಬ್ದುಲ್ ಜಾಫರ್.

ಕಲಬುರಗಿ : ನಗರದ ಸೂಪರ್ ಮಾರ್ಕೆಟ್ ಗೆ ರಾತ್ರಿ 8 ಗಂಟೆ ಸುಮಾರಿಗೆ ಮಾರಕಾಸ್ತ್ರ ಹಿಡಿದು ಬಂದ ಅಬ್ದುಲ್ ಜಾಫರ್ ಎಂಬಾತ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ ನಡೆಸಿ ಭೀತಿ ಹುಟ್ಟಿಸಿದ್ದ. ಈತನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ರು. ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪಿಎಸ್‍ಐ ವಹೀದ್ ಕೊತ್ವಾಲ್ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ರು. ಆದರೆ ಪೊಲೀಸರು ಒಳ್ಳೇ ಮಾತು ಹೇಳಿದ್ರೂ ಕೇಳದೆ ಆವಾಜ್ ಹಾಕಿದ ಆರೋಪಿ ಹಲ್ಲೆಗೂ ಮುಂದಾಗಿದ್ದ. ಹೀಗಾಗಿ ಸುಮಾರು 15ಕ್ಕೂ ಹೆಚ್ಚು ಪೊಲೀಸರು 1 ಗಂಟೆಗಳ ಕಾಲ ಆರೋಪಿಯನ್ನು ಹರಸಾಹಸ ಪಡಬೇಕಾಯಿತು.

ಪೊಲೀಸರು ಆರೋಪಿಯನ್ನ ಸುತ್ತುವರಿದು ಶರಣಾಗುವಂತೆ ಸೂಚಿಸಿದ್ರು. ಆದರೆ ಈ ವೇಳೆ ಆರೋಪಿ ಪೊಲೀಸರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಪಿಎಸ್‍ಐ ತಮ್ಮ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ರು. ಇದಕ್ಕೂ ಜಗ್ಗದಿದ್ದಾಗ ಪಿಎಸ್‍ಐ ವಹೀದ್ ಕೊತ್ವಾಲ್ ಆರೋಪಿ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ರು. ಗುಂಡೇಟಿನಿಂದ ಸ್ಥಳದಲ್ಲಿ ಕುಸಿದುಬಿದ್ದ ಆರೋಪಿಗೆ ಪೊಲೀಸರು ಹಿಗ್ಗಾಮುಗ್ಗ ಲಾಠಿ ರುಚಿ ತೋರಿಸಿದರು.‌ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿಯ ಹುಚ್ಚಾಟದಿಂದ ಜನ ಹೆದರಿದ್ದಾರೆ. ಆದರೆ ಆರೋಪಿ ಈ ರೀತಿ ಕೃತ್ಯ ಪಾನಮತ್ತ ನಷೆಯಲ್ಲಿ ಮಾಡಿದ್ದಾನಾ..? ಅಥವಾ ಉದ್ದೇಶಪೂರ್ವಕವಾಗಿ ಹಣ ವಸೂಲಿಗೆ ಇಳಿದ್ದಿದ್ದನಾ ಎಂಬುದರ ಬಗ್ಗೆ ಪೊಲೀಸ್ ತನಿಖೆ ನಂತರವಷ್ಟೇ ತಿಳಿಯಬೇಕಾಗಿದೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.