T20I ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಕ್ಯಾನ್ಬೆರಾ: ಆಸ್ಟ್ರೇಲಿಯಾ T20 ತಂಡದ ನಾಯಕನಾಗಿದ್ದ ಆರನ್ ಫಿಂಚ್ (Aaron Finch) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ 12 ವರ್ಷಗಳ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ 2011ರಲ್ಲಿ ನಡೆದ ಟಿ20 ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ T20I ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಫಿಂಚ್ ಇಲ್ಲಿಯವರೆಗೆ 254 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈವರೆಗೆ 8,804 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 172 ಅರ್ಧ ಶತಕಗಳೂ ಸೇರಿವೆ. 103 ಟಿ20 ಪಂದ್ಯಗಳಾಡಿರುವ ಅವರು, 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ ದೀರ್ಘಾವದಿಯ ವರೆಗೆ ವೈಟ್ ಬಾಲ್ ಪಂದ್ಯವನ್ನು ಮುನ್ನಡೆಸಿದ ಆಸ್ಟ್ರೇಲಿಯಾ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಫಿಂಚ್ ಟಿ20 ನಾಯಕತ್ವ ಮುಂದುವರಿಸಿದ್ದರು. 2022ರ ಟಿ20 ವಿಶ್ವಕಪ್ ಗೆಲುವಿನ ಕನಸು ಕಂಡಿದ್ದರು. ಕೊನೆಗೆ ನಿರಾಶಾದಾಯಕವಾಗಿ ಹಿಂದಿರುಗಬೇಕಾಯಿತು. ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ 44 ಎಸೆತ ಎದುರಿಸಿದ್ದ ಫಿಂಚ್ 63 ರನ್ ಗಳಿಸಿದ್ದರು. ಪರಿಣಾಮ ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 42 ರನ್‌ಗಳ ಭರ್ಜರಿ ಜಯ ಸಾಧಿಸಿತು.ಫಿಂಚ್ 2018ರಲ್ಲಿ ಜಿಂಬಾಬ್ವೆ ವಿರುದ್ಧ ಮಿಂಚಿನ ಆಟವಾಡಿ ಕೇವಲ 76 ಎಸೆತಗಳಲ್ಲಿ 10 ಸಿಕ್ಸರ್, 16 ಬೌಂಡರಿಗಳೊಂದಿಗೆ 172 ರನ್ ಚಚ್ಚಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದರು. 2013 ರಲ್ಲಿ ಇಂಗ್ಲೆಂಡ್ ವಿರುದ್ಧ 63 ಎಸೆತಗಳಲ್ಲಿ 156 ರನ್ ಬಾರಿಸಿ ದಾಖಲೆ ಬರೆದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಫಿಂಚ್, ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. 2024ರ ಟಿ20 ವಿಶ್ವಕಪ್‌ವರೆಗೆ ನಾನು ಆಡುವುದಿಲ್ಲ ಎಂಬುದನ್ನು ಅರಿತುಕೊಂಡು ಕೆಳಗಿಳಿಯಲು ನಿರ್ಧರಿಸಿದ್ದೇನೆ. ತಂಡಕ್ಕೆ ಇನ್ನಷ್ಟು ಕಾಲಾವಕಾಶ ನೀಡಲು ಇದು ಸರಿಯಾದ ಸಮಯವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.