ದಾವಣಗೆರೆ: ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಬರಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಕುರ್ಚಿ ತೂರಾಟ ನಡೆಸಿ ಗಲಾಟೆ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಪೊಲೀಸರು ಗಲಾಟೆಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಾತ್ರೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.ಆದರೆ, ಕಾರ್ಯಕ್ರಮದ ಬಗ್ಗೆ ತಿಳಿದಿಲ್ಲ ಹಾಗೂ ಆಯೋಜಕರಿಂದ ನನಗೆ ಆಹ್ವಾನ ಬಂದಿಲ್ಲ ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಕಾರ್ಯಕ್ರಮದ ಸಮಾರೋಪಕ್ಕೆ ಸಂಜೆ 5:30ಕ್ಕೆ ನಟ ಕಿಚ್ಚ ಸುದೀಪ್ ಬರುತ್ತಾರೆ ಎಂದು ತಿಳಿಸಲಾಗಿತ್ತು ಹಾಗೂ ಅದಕ್ಕಾಗಿ ಕಾರ್ಯಕ್ರಮ ಕೂಡ ಸಜ್ಜಾಗಿತ್ತು. ಅದೇ ಕಾರಣದಿಂದ, ಇಂದು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸುದೀಪ್ ಅಭಿಮಾನಿಗಳು ಸೇರಿದಂತೆ ಜನರು ಸೇರಿದ್ದರು. ಅಲ್ಲದೆ, ಸುದೀಪ್ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದರು. ಆದರೆ, ಸಂಜೆ ವೇಳೆ ಸುದೀಪ್ ಬರುವುದಿಲ್ಲ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಅಭಿಮಾನಿಗಳು ಸ್ಥಳದಲ್ಲಿಯೇ ಇದ್ದ ಕುರ್ಚಿಗಳನ್ನು ತೂರಲು ಪ್ರಾರಂಭಿಸಿದರು.ಪೊಲೀಸರು ಸೂಚನೆ ನೀಡಿದರೂ ಕೇಳದ ಜನರು ಕುರ್ಚಿಗಳನ್ನು ತೂರಿ ವಾಲ್ಮೀಕಿ ಜಾತ್ರಾ ಸಮಿತಿ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುದೀಪ್ ಭಾವಚಿತ್ರಿವಿರುವ ಬಾವುಟಗಳನ್ನು ಪ್ರದರ್ಶಿಸುತ್ತ ಗಲಾಟೆ ನಡೆಸಿದರು. ಇದರಿಂದ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಲಾಟೆ ನಿಯಂತ್ರಿಸಲು ಪೊಲೀಸರು ಅಭಿಮಾನಿಗಳ ಮೇಲೆ ಲಾಠಿ ಬೀಸಿದರು.ಬಳಿಕ ಸ್ವತಃ ವಾಲ್ಮೀಕಿ ಪೀಠದ ಸ್ವಾಮೀಜಿ ಪ್ರಸನ್ನಾನಂದ ಪುರಿ ಶ್ರೀಗಳೇ ಮೇಲೆದ್ದು ಅಭಿಮಾನಿಗಳು ಶಾಂತವಾಗಿರುವಂತೆ ಮನವಿ ಮಾಡಿಕೊಂಡರು. ಬೆಂಗಳೂರಿನಲ್ಲಿ ಏರ್ ಶೋ ಇರುವುದರಿಂದ ಸುದೀಪ್ ಅವರಿಗೆ ಹೆಲಿಕಾಪ್ಟರ್ ಸಿಗದ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ಮುಂದಿನ ಬಾರಿ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ಬಾರಿಯ ಜಾತ್ರೆಯಲ್ಲಿ ನೋಡಬಹುದು ಎಂದು ಮನವಿ ಮಾಡಿಕೊಂಡರು. ಅದಕ್ಕೂ ಗಲಾಟೆ ನಿಲ್ಲದಿದ್ದಾಗ ಲಾಠಿ ಪ್ರಹಾರ ನಡೆಯಿತು.’
ನನಗೆ ಕಾರ್ಯಕ್ರಮಕ್ಕೆ ಆಹ್ವಾನವೇ ಇರಲಿಲ್ಲ…
‘ಆಯೋಜಕರು ಕಾರ್ಯಕ್ರಮಕ್ಕೆ ನಟ ಸುದೀಪ್ ಆಗಮಿಸುವುದಾಗಿ ಪ್ರಚಾರ ಮಾಡಿದ್ದಾರೆ. ಆದರೆ, ವಾಲ್ಮೀಕಿ ಜಾತ್ರೆಯಲ್ಲಿ ಆಗಿರುವ ಗಲಾಟೆಯ ಬಗ್ಗೆ ತಿಳಿದು ಸ್ವತಃ ಸುದೀಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು, ‘ಆ ಕಾರ್ಯಕ್ರಮಕ್ಕೆ ಆಯೋಜಕರಿಂದ ಆಹ್ವಾನ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ಗುರುವಾರ ರಾತ್ರಿ ಟ್ವೀಟಿಸಿರುವ ಅವರು ‘ಸ್ನೇಹಿತರಿಗೆ ನಲ್ಮೆಯ ನಮಸ್ಕಾರ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ’ ಎಂದಿದ್ದಾರೆ.ಮುಂದುವರಿದು, ‘ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ …ಪ್ರೀತಿಯೊಂದಿಗೆ ನಿಮ್ಮ ಕಿಚ್ಚ’ ಎಂದು ಹಂಚಿಕೊಂಡಿದ್ದಾರೆ.
ಆಯೋಜಕರು ಕಾರ್ಯಕ್ರಮಕ್ಕೆ ಆಹ್ವಾನಿಸದೆಯೇ ಅಭಿಮಾನಿಗಳಲ್ಲಿ ಇಲ್ಲದ ಆಸೆ ಉಂಟು ಮಾಡಿ, ಅವರು ಕಾಯುವಂತೆ ಮಾಡಿರುವುದು ಸುದೀಪ್ ಅವರ ಟ್ವೀಟ್‌ಗಳಿಂದ ಸ್ಪಷ್ಟವಾಗಿದೆ.