ಬೆಂಗಳೂರು: ಉತ್ತರ ಭಾರತದಲ್ಲಿ ತೀವ್ರ ಚಳಿಯ ಕಾರಣದಿಂದ ಮುಂದೂಡಲಾಗಿದ್ದ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ರವಾಸದ ಮೂರನೇ ಟ್ರಿಪ್ ಫೆ. 21ರಂದು ಪ್ರಾರಂಭವಾಗಲಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ರೈಲು ಪ್ಯಾಕೇಜ್ ಟೂರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆ ನಂತರ ನಡೆದಂತಹ 2ನೇ ಟ್ರಿಪ್ ರೈಲು ಪ್ರವಾಸ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಮೂರನೇ ಟ್ರಿಪ್: ಫೆ. 21ರಂದು ʼಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನʼ ರೈಲು ಪ್ರವಾಸ ಮೂರನೇ ಟ್ರಿಪ್‌ನ್ನು ನಿಗದಿಗೊಳಿಸಲಾಗಿದೆ. 8 ದಿನಗಳ ಈ ಯಾತ್ರೆಯಲ್ಲಿ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂದಿರುಗಲಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್ ಗೌರವ್ ರೈಲನ್ನು ಪ್ರಾರಂಭಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪಾತ್ರವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎಸಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಮಾಡಲಾಗಿದೆ.

ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಊಟ, ಉಪಾಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ನಿಯಮಿತ ರೈಲು ಪ್ರವಾಸದ ವೇಳಾಪಟ್ಟಿ: ಪ್ರತಿ ತಿಂಗಳು ನಿಯಮಿತವಾಗಿ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ರೈಲನ್ನು ಓಡಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯ, ಐಆರ್‌ಸಿಟಿಸಿ ಹಾಗೂ ಮುಜರಾಯಿ ಇಲಾಖೆ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ಟ್ರಿಪ್‌ಗಳ ವೇಳಾ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಸೂಚನೆ ನೀಡಲಾಗಿದೆ.