ಬಿಜೆಪಿ ಸೋಲಿಸಿದ ಸ್ವಪಕ್ಷದ ಮುಖಂಡರನ್ನು ವಜಾಗೊಳಿಸಿ – ಗುಬ್ಬಿ ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶದ ಒತ್ತಾಯ

ಗುಬ್ಬಿ: ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಸಂಸದ ಬಸವರಾಜು, ಬಿಜೆಪಿ ಮುಖಂಡರಾದ ಚಂದ್ರಶೇಖರ ಬಾಬು, ಎನ್. ಸಿ. ಪ್ರಕಾಶ್ ನೇರ ಹೊಣೆ. ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಪಟ್ಟು ಹಿಡಿದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿ ಸಭೆಯನ್ನು ಕೆಲ ಕಾಲ ಸ್ಥಗಿತಗೊಳಿಸಿದ ಘಟನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ನಡೆಯಿತು.

ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಲು ಆರಂಭಿಸಿದಂತೆ ಪಕ್ಷದಲ್ಲಿದ್ದೇ ದ್ರೋಹ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಕಾರ್ಯಕರ್ತರ ಕೂಗು ಆರಂಭವಾಯಿತು. ಕೆಲ ಮುಖಂಡರ ಹೆಸರಿಗೆ ಧಿಕ್ಕಾರ ಕೂಗಿದರು. ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರ ಮಾತು ಕೇಳಿ ಎಂದು ಅಬ್ಬರಿಸಿದರು. ನಿಮ್ಮ ಭಾಷಣ ಬೇಕಿಲ್ಲ ಈಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಾರ್ಯಕರ್ತರಿಗೆ ಅವಕಾಶ ನೀಡಲಾಯಿತು. ವಕೀಲ ಧರಣಿ ಮಾತನಾಡಿ ಬಿಜೆಪಿ ಗೆಲುವಿಗೆ ಬಿಜೆಪಿಯ ಕೆಲ ಮುಖಂಡರ ಕುತಂತ್ರ ಅಡ್ಡವಾಯಿತು. ಕಳೆದ ಬಾರಿ ಸಹ ಇವರನ್ನು ಬಂಡಾಯ ಎಬ್ಬಿಸಿ ಸೋಲಿಸಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಿ ಅನ್ಯಾಯ ಮಾಡಿದರು. ತುಮಕೂರಿನಲ್ಲಿ ಜ್ಯೋತಿ ಗಣೇಶ್ ಅವರಿಗೆ ಒಕ್ಕಲಿಗರ ಮತ ಬೇಕಿತ್ತು. ಈ ನಿಟ್ಟಿನಲ್ಲಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆ ಐದು ಸಾವಿರಕ್ಕೂ ಅಧಿಕ ಮತ ಹಾಕಿಸಿ ಸ್ವಪಕ್ಷದ ಅಭ್ಯರ್ಥಿ ದಿಲೀಪ್ ಅವರ ಬೆನ್ನಿಗೆ ಚೂರಿ ಹಾಕಿದರು. ಇವರ ತಂತ್ರಕ್ಕೆ ಕಾರಣರಾದ ಕೆಲ ಮುಖಂಡರು ಈ ಸಭೆಗೆ ಬರಬೇಕಿತ್ತು. ಯಾಕೆ ಬಂದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಈ ಕೂಡಲೇ ಇವರನ್ನು ಪಕ್ಷದಿಂದ ವಜಾಗೊಳಿಸಿ ಎಂದು ಒತ್ತಾಯಿಸಿದರು.

ಕೆಲ ಕಾಲ ಆಕ್ರೋಶಗೊಂಡ ನೂರಾರು ಕಾರ್ಯಕರ್ತರನ್ನು ಸಮಾಧಾನ ಮಾಡುವ ಕೆಲಸ ದಿಲೀಪ್ ಕುಮಾರ್ ಮಾಡಿದರು. ಆದರೂ ರೊಚ್ಚಿಗೆದ್ದ ಕಾರ್ಯಕರ್ತರು ತಮ್ಮ ಎಲ್ಲಾ ಕೋಪವನ್ನು ಹಿಡಿ ಶಾಪ ಹಾಕಿದರು, ನಂತರ ಮಾತನಾಡಿದ ದಿಲೀಪ್ ಕುಮಾರ್ ಅವರು ನನ್ನ ಮೇಲೆ ಷಡ್ಯಂತ್ರ ರೂಪಿಸಿ ಸೋಲಿಸಿದರೆ ಕ್ಷೇತ್ರವನ್ನು ಬಿಟ್ಟು ಹೋಗುತ್ತೇನೆ ಮತ್ತೆ ಚುನಾವಣೆಯಲ್ಲಿ ಸ್ಪರ್ದಿಸಲ್ಲ ಎಂದು ಭಾವಿಸಿ ಕುತಂತ್ರದ ಕೆಲಸವನ್ನು ಮಾಡಿದರು ಆದರೆ ನಾನು ಕ್ಷೇತ್ರವನ್ನು ಬಿಟ್ಟು ಹೋಗಲು ಬಂದಿಲ್ಲ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಬಂದಿದ್ದೇನೆ , ಮತ್ತೆ ಪಕ್ಷವನ್ನು ಸಂಘಟಿಸುತ್ತೇನೆ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಹೇಳಿದರು.