ಕಾಂಗ್ರೆಸ್ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಮೋದಿ

ಇದೇ ಭಾನುವಾರ (ಮೇ 28) ರಂದು ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ, ಅದೇ ದಿನ ಐತಿಹಾಸಿಕ ಚಿನ್ನದ ರಾಜದಂಡವನ್ನು ಲೋಕಸಭಾಧ್ಯಕ್ಷರ ಸೀಟಿನ ಪಕ್ಕದಲ್ಲಿ ಪ್ರಧಾನಿ ಮೋದಿಯವರು ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತಿಳಿಸಿದ್ದಾರೆ.

ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ಸಮಯದಲ್ಲಿ ಬ್ರಿಟಿಷರು ಬರೀ ಘೋಷಣೆ ಮಾಡಿದ್ದು ಮಾತ್ರವಲ್ಲದೆ ಅಂದು ದೇಶದ ಮೊದಲ ಪ್ರಧಾನಿಯಾಗಿದ್ದ ಜವಹಾರಲಾಲ್ ನೆಹರು ಅವರಿಗೆ 1947 ಆಗಸ್ಟ್ 14 ರಂದು ಮಧ್ಯರಾತ್ರಿ ಸ್ವಾತಂತ್ರ್ಯ ಹೊಂದುವ 15 ನಿಮಿಷಕ್ಕೆ ಮುನ್ನ ಈ ಸೆಂಗೋಲ್ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದ್ದರು. ರಾಜದಂಡವನ್ನು ಹಸ್ತಾಂತರ ಮಾಡುವ ಮೂಲಕ ಅಧಿಕೃತವಾಗಿ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತ್ತು.

ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿತ್ತು ನಂತರ ಈ ರಾಜದಂಡವನ್ನು ಪ್ರಯಾಗರಾಜ್ ನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಗೊತ್ತಾಗುತ್ತಿದ್ದಂತೆ ಅದನ್ನು ಹೊಸ ಸಂಸತ್ ಭವನದಲ್ಲಿ ಇಡಲು ತೀರ್ಮಾನಿಸಿ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಹೊಸ ಸಂಸತ್ ಭವನದಲ್ಲಿ ಪ್ರಧಾನಿ ಮೋದಿಯವರು ಸ್ಥಾಪನೆ ಮಾಡುತ್ತಿದ್ದಾರೆ.

ರಾಜದಂಡದ ಇತಿಹಾಸ

ಸೆಂಗೋಲ್ ಎಂಬುದು ತಮಿಳು ಪದವಾಗಿದ್ದು ಧರ್ಮನಿಷ್ಠೆ ಅಥವಾ ನ್ಯಾಯಪರತೆ ಎಂದರ್ಥ , ತಮಿಳುನಾಡು ಮೂಲದ ಚೋಳ ರಾಜವಂಶ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಗಳಿಗೆ ಅಸಾಧಾರಣ ಕೊಡುಗೆ ನೀಡುತ್ತಿತ್ತು, ಚೋಳರ ಕಾಲದಲ್ಲಿ ಸೆಂಗೋಲ್ ಎಂಬುದು ರಾಜರ ಪಟ್ಟಾಭಿಷೇಕದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿತ್ತು. ಇದೊಂದು ಧಾರ್ಮಿಕ ಮಹತ್ವ ಹೊಂದಿರುವ ರಾಜದಂಡ, ರಾಜ ಪರಂಪರೆಯ ಪಾಲಿಗೆ ಇದು ಪವಿತ್ರ ಲಾಂಛನ ಒಬ್ಬ ಆಡಳಿತಗಾರನಿಂದ ಮುಂದಿನವರೆಗಿನ ಅಧಿಕಾರದ ವರ್ಗಾವಣೆಯನ್ನು ಇದು ಪ್ರತಿನಿಧಿಸುತ್ತಿತ್ತು .

ನೋಡಲು ಸುಂದರವಾಗಿರುವ ಈ ಸೆಂಗೋಲ್ ಸಂಪೂರ್ಣ ಚಿನ್ನದಿಂದ ಮಾಡಲ್ಪಟ್ಟಿದ್ದು ಇದು ಸುಮಾರು 5 ಅಡಿ ಉದ್ದವಿದೆ ನಂದಿಯ ಪ್ರತಿಕೃತಿ ಸೆಂಗೋಲ್ ನ ತುದಿಯಲ್ಲಿದ್ದು ಇದು ನ್ಯಾಯ, ಶ್ರದ್ದೆ, ನಿಷ್ಠೆ ಹಾಗೂ ಪರಿಶ್ರಮದ ಸಂಕೇತವಾಗಿದೆ.

ಹೀಗೆ ದೇಶದ ಇತಿಹಾಸದ ಮೈಲಿಗಲ್ಲೊಂದನ್ನು ಪ್ರತಿನಿಧಿಸಿದ ಸೆಂಗೋಲ್ ಇತಿಹಾಸದ ಸಾಕ್ಷಿಯಾಗಿ ಇನ್ನು ಮುಂದೆ ಸಂಸತ್ತಿನಲ್ಲಿಯೇ ಇರಲಿದೆ.