ಪ್ರಧಾನಿ ಮೋದಿ ಸರ್ಕಾರಕ್ಕೆ 9 ವರ್ಷಗಳು ! 9ವರ್ಷಗಳ ಸೇವೆ ಎಂದು ಬಣ್ಣಿಸಿ ಮೋದಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದಿಗೆ ಒಂಬತ್ತು ವರ್ಷಗಳನ್ನು ಪೂರೈಸಿದೆ. ಇದನ್ನು ಒಂಬತ್ತು ವರ್ಷಗಳ ಸೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.

ಕಳೆದ 9 ವರ್ಷಗಳಲ್ಲಿ, ನಾವು ಭಾರತದ ಬಡವರ ಘನತೆಯನ್ನು ಎತ್ತಿಹಿಡಿಯಲು ಮತ್ತು ಜೀವನೋಪಾಯವನ್ನು ಹೆಚ್ಚಿಸಲು ಶ್ರಮಿಸಿದ್ದೇವೆ. ಹಲವಾರು ಉಪಕ್ರಮಗಳ ಮೂಲಕ ನಾವು ಲಕ್ಷಾಂತರ ಜೀವನವನ್ನು ಪರಿವರ್ತಿಸಿದ್ದೇವೆ. ನಮ್ಮ ಧ್ಯೇಯವು ಮುಂದುವರಿಯುತ್ತದೆ – ಪ್ರತಿಯೊಬ್ಬ ನಾಗರಿಕನ ಉನ್ನತಿ ಮತ್ತು ಅವರ ಕನಸುಗಳನ್ನು ಈಡೇರಿಸುವುದು ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷವು (ಬಿಜೆಪಿ) ಒಂಬತ್ತನೇ ವಾರ್ಷಿಕೋತ್ಸವವನ್ನು ವಿವಿಧ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ಮಂಗಳವಾರದಿಂದ ಒಂದು ತಿಂಗಳ ಕಾಲ ಪ್ರಚಾರವನ್ನು ಯೋಜಿಸಿದ್ದಾರೆ.

ಬಿ. ವೈ ವಿಜಯೇಂದ್ರ ಅವರು ಟ್ವೀಟ್ ಮಾಡಿ ಸರ್ವರಿಗೂ ಸಮಬಾಳು, ಸಮಪಾಲು, ಸಾಮಾಜಿಕ ನ್ಯಾಯದ ತತ್ವವನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಭ್ರಷ್ಟಮುಕ್ತ ಆಡಳಿತದೊಂದಿಗೆ ಭಾರತದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದು, ನವ ಭಾರತ ನಿರ್ಮಿಸುತ್ತಾ, ಸತತ 2ನೇ ಅವಧಿಯಲ್ಲಿ ಕೇಂದ್ರ ಸರ್ಕಾರದ ನೇತೃತ್ವವಹಿಸಿ ಯಶಸ್ವಿ 9 ವರ್ಷ ಪೂರೈಸಿರುವ ವಿಶ್ವ ಮೆಚ್ಚಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಸರ್ಕಾರಕ್ಕೆ ಹಾರ್ದಿಕ ಅಭಿನಂದನೆಗಳು. ದೇಶದ ಅಭಿವೃದ್ಧಿ ದಿಕ್ಕು ಬದಲಿಸಿದ್ದಲ್ಲದೇ ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕು, ಪ್ರತಿ ಗ್ರಾಮ, ಪ್ರತಿ ಮನೆಗಳಲ್ಲೂ ಫಲಾನುಭವಿಗಳಿರುವುದು ಪ್ರಧಾನಿಗಳ ಸ್ವಚ್ಚ, ದಕ್ಷ, ಪ್ರಾಮಾಣಿಕ ಆಡಳಿತಕ್ಕೆ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ.

ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತುಮಕೂರು ಶಾಸಕರಾದ ಜಿ. ಬಿ ಜ್ಯೋತಿಗಣೆಶ್ ಅವರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.