ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಮಾಸಿಕ 2000 ರೂಗಳನ್ನು ಪಡೆದುಕೊಳ್ಳಲು ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವ ವಿವರ
- ಆನ್ ಲೈನ್ ಮೂಲಕ ಅಥವಾ ಭೌತಿಕವಾಗಿಯೂ ಸಹ ಅರ್ಜಿಗಳನ್ನು , ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
- ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಖಾತೆಯ ವಿವರ ಹಾಗೂ ಪತಿಯ ಆಧಾರ್ ಕಾರ್ಡ್ ಮತ್ತು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯು ಅಗತ್ಯವಾಗಿರುತ್ತದೆ.
- ಮಂಜೂರತಿಯ ನಂತರ ನಗದು ಡಿಬಿಟಿ ಮೂಲಕ ನೇರವಾಗಿ ಖಾತೆಗೆ ವರ್ಗಾವಣೆ ಆಗಲಿದೆ.
- ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ.
- ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಪಡಿಸಿಲ್ಲ.
- ಅರ್ಜಿದಾರರಿಗೆ ಯಾವುದೇ ಗೊಂದಲಗಳಿದ್ದರೂ 1902 ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ
ವಿಧಾನಸೌಧದಲ್ಲಿ ಗುರುವಾರ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ ಜೂನ್ 15 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಬೇಕಿತ್ತು ಆದರೆ ಗೊಂದಲಗಳಿದ್ದರಿಂದ ಒಂದು ದಿನ ಮುಂದಕ್ಕೆ ಹಾಕಿದ್ದೇವೆ, ಶುಕ್ರವಾರ ಮಧ್ಯಾಹ್ನ 1:30 ರ ನಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಗೆ ವಾರ್ಷಿಕವಾಗಿ ಅಂದಾಜು 30 ಸಾವಿರ ಕೋಟಿ ಅನುದಾನ ಹೊಂದಿಸಬೇಕಾಗಿದೆ. ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗುತ್ತದೆ ಎಂದು ಹೇಳಿದರು.