ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ಪೊಲೀಸ್ ಇಲಾಖೆಗೆ 2 ಡಾಬಾರ್ ಶ್ವಾನಗಳ ಕೊಡುಗೆ

ಮೈಸೂರು : ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರು ನಗರ ಪೊಲೀಸ್ ಶ್ವಾನದಳಕ್ಕೆ ಎರಡು ಡಾಬರ್ ಶ್ವಾನಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ನಾಲ್ಕು ತಿಂಗಳ ಈ ಗಂಡು ನಾಯಿಗಳು ಚುರುಕಾಗಿದ್ದು, ಅಪರಾಧ ಪ್ರಕರಣಗಳ ಮೂಲ ಹುಡುಕುವ ಸಾಮರ್ಥ್ಯ ಹೊಂದಿದ್ದು, ತಾವೂ ಸಹ ಆ ನಿಟ್ಟಿನಲ್ಲಿ ತರಬೇತಿ ನೀಡಿದ್ದೇವೆ ಎಂದು ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನಾಗರಾಜ್ ರಾಚಯ್ಯ ತಿಳಿಸಿದ್ದಾರೆ.

ಮೈಸೂರಿನ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿ.ರಮೇಶ್ ಅವರಿಗೆ ಶ್ವಾನಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಎ.ಮಾರುತಿ, ಶ್ವಾನದಳದ ಉಸ್ತುವಾರಿ ಅಧಿಕಾರಿಯಾದ ಪಿ.ಸುರೇಶ್, ಸಿಬ್ಬಂದಿಗಳಾದ ಪುರುಷೋತ್ತಮ್, ಬಸಂತ್ ಕುಮಾರ್ ಉಪಸ್ಥಿತರಿದ್ದರು.

ಈ ಕುರಿತು ಮಾತನಾಡಿದ ಡಿಸಿಪಿ ಮಾರುತಿ, ಈ ಡಾಬರ್ ತಳಿಯ ಶ್ವಾನಗಳನ್ನು ಬೆಂಗಳೂರಿನ ಆಡುಗೋಡಿಯಲ್ಲಿರುವ ಶ್ವಾನ ತರಬೇತಿ ಸೆಂಟರ್‌ಗೆ ಕಳುಹಿಸಿ ತರಬೇತಿ ಕೊಡಿಸಲಾಗುವುದು, ಇಲ್ಲಿಯವರೆಗೆ ಶ್ವಾನದಳದಲ್ಲಿ 8 ಶ್ವಾನಗಳಿದ್ದು ಈಗ ದರ್ಶನ್ ಅಭಿಮಾನಿ ಸಂಘದವರು ನೀಡಿರುವ 2ಶ್ವಾನಗಳನ್ನು ಸೇರಿ ಒಟ್ಟು 10 ಶ್ವಾನಗಳಿವೆ. ಪ್ರತಿಯೊಂದನ್ನು ಇಬ್ಬರು ತರಬೇತಿ ಹೊಂದಿದ ಪೊಲೀಸ್ ಸಿಬ್ಬಂದಿ ನಿರ್ವಹಿಸುತ್ತಾರೆ. ಅವುಗಳನ್ನು ಕಾಲ ಕಾಲಕ್ಕೆ ಪಶು ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿ, ಅವುಗಳ ಆರೋಗ್ಯದ ಮೇಲೆ ನಿಗಾ ಇರಿಸುತ್ತಾರೆ ಎಂದು ಹೇಳಿದರು.