ಜಿಲ್ಲಾ ಆಸ್ಪತ್ರೆ ತುಮಕೂರು ! ಜುಲೈ 14ರಂದು ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ

ತುಮಕೂರು: ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಟ್ರಾಮ್ ಕೇರ್ ಸೆಂಟರ್‌ಗೆ ತಜ್ಞ ವೈದ್ಯರು ಮತ್ತು ಅಪಘಾತ ಚಿಕಿತ್ಸಾ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ತಜ್ಞರು/ವೈದ್ಯಾಧಿಕಾರಿಗಳು ಸಂಬಂಧಿಸಿದ ಅಗತ್ಯ ಅರ್ಜಿ ಮತ್ತು ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿ,ಜಿಲ್ಲಾ ಆಸ್ಪತ್ರೆ, ತುಮಕೂರು ಇಲ್ಲಿ ಜುಲೈ 14ರಂದು ಬೆಳಿಗ್ಗೆ 10.30 ಗಂಟೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ನ್ಯೂರೋ ಸರ್ಜನ್, ರೇಡಿಯೋಲಜಿಸ್ಟ್, ಅನಸ್‌ಥೀಸಿಯಾಲಜಿಸ್ಟ್, ಆರ್ಥೋಪೆಡಿಕ್ ಸರ್ಜನ್, ಜನರಲ್ ಸರ್ಜನ್, ಅಪಘಾತ ಚಿಕಿತ್ಸಾ ವೈದ್ಯರುಗಳು, ಈ ಹುದ್ದೆಗಳಿಗಾಗಿ ನೇರ ಸಂದರ್ಶನ ನಡೆಯಲಿದೆ.

ಸಂಬಂಧಿಸಿದ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ(ಎಂಎಸ್/ಎಂಡಿ /ಡಿಎನ್‌ಬಿ) ಪಡೆದು ಕನಿಷ್ಟ 5 ವರ್ಷಗಳ ಅನುಭವ ಹೊಂದಿರಬೇಕು, ಸೂಪರ್ ಸ್ಪೆಷಾಲಿಟಿ ತಜ್ಞತೆಗೆ ಎಂ.ಎಸ್.ಆರ್ಥೋ ವಿಭಾಗದಲ್ಲಿ ಟ್ರಾಮ್ ಫೆಲೋಷಿಪ್ ಹೊಂದಿರಬೇಕು.ಯಾವುದೇ ಇತರೆ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ಹೊಂದಿರಬಾರದು ಮತ್ತು ವಯಸ್ಸು 60ವರ್ಷ ಮೀರಿರಬಾರದು, ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಿರಬೇಕು.

ಈ ಗುತ್ತಿಗೆ ಅವಧಿಯು ಒಂದು ವರ್ಷಕ್ಕೆ ಸೀಮಿತವಾಗಿದ್ದು, ನಂತರದಲ್ಲಿ ತೃಪ್ತಿಕರ ಸೇವೆ ಆಧಾರದ ಮೇಲೆ ಗುತ್ತಿಗೆ ಅವಧಿ ಮುಂದುವರೆಸಲು ತಿಳಿಸಲಾಗುವುದು. ತಜ್ಞ ವೈದ್ಯರು ಮತ್ತು ಅಪಘಾತ ಚಿಕಿತ್ಸಾ ವೈದ್ಯರುಗಳಿಗೆ ತಿಂಗಳಿಗೆ ಸರ್ಕಾರಿ ಆದೇಶದಂತೆ ಗುತ್ತಿಗೆ ಆಧಾರದ ಮೇಲೆ ವೇತನ ಪಾವತಿಸಲಾಗುವುದು.

ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿ ಕಡ್ಡಾಯವಾಗಿದ್ದು, ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.