ಜಲಪಾತದ ವೀಕ್ಷಣೆ ದುರಂತ : ಕಾಲು ಜಾರಿ ನೀರಿನಲ್ಲಿ ಕೊಚ್ಚಿಹೋದ ಯುವಕ

ಕೊಲ್ಲೂರಿಗೆ ಪ್ರವಾಸಕ್ಕೆಂದು ಸ್ನೇಹಿತರ ಜೊತೆ ಆಗಮಿಸಿದ್ದ ಶರತ್ ಕುಮಾರ್ (23) ಎಂಬ ಯುವಕ ಕಾಲು ಜಾರಿಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದಲ್ಲಿ ಭಾನುವಾರ ಮಧ್ಯಾಹ್ನ ನೆಡೆದಿದೆ. ಯುವಕ ಕಾಲು ಜಾರಿ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೆ ಎಚ್ ನಗರ ಸುಣ್ಣದಹಳ್ಳಿ ನಿವಾಸಿ ಶರತ್ ಕುಮಾರ್ (23) ನಿರುಪಾಲದ ಯುವಕ.

ಭಾನುವಾರದಂದು ಶರತ್ ಕುಮಾರ್ ತನ್ನ ಸ್ನೇಹಿತ ಗುರುರಾಜ್ ಅವರೊಂದಿಗೆ ಕೊಲ್ಲೂರಿಗೆ ಕಾರಿನಲ್ಲಿ ಆಗಮಿಸಿದ್ದರು ಈ ವೇಳೆ ಕೊಲ್ಲೂರು ಗ್ರಾಮದ ಅರಿಶಿಣ ಗುಂಡಿ ಜಲಪಾತವನ್ನು ವೀಕ್ಷಣೆ ಮಾಡಲು ಹೋಗಿದ್ದರು, ಸುಮಾರು ಮಧ್ಯಾಹ್ನ 3:30 ಸಮಯದಲ್ಲಿ ಜಲಪಾತದ ಹತ್ತಿರ ಬಂಡೆಯೊಂದನ್ನು ಹತ್ತಿ ಅದರ ಅಂಚಿನಲ್ಲಿ ನಿಂತಿದ್ದಾಗ ಕಾಲು ಜಾರಿದ ಪರಿಣಾಮ ಸೌಪರ್ಣಿಕಾ ನದಿಗೆ ಬಿದ್ದಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಶರತ್ ಕುಮಾರ್ ಪತ್ತೆಗಾಗಿ ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ.