ತುಮಕೂರು: ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂಬ ಕಾರಣಕ್ಕೆ ಮನನೊಂದು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕುರು ಜಿಲ್ಲೆ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಬಳಿಯ ಸಿಂಗರೆಡ್ಡಿ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಶಾ ಕಾರ್ಯಕರ್ತ ವರಲಕ್ಷಮ್ಮ ಎಂಬುವವರ ಪುತ್ರ ನಿಖಿಲ್ ಗೌಡ (18) ಆತ್ಮಹತ್ಯೆಗೆ ಶರಣಾದ ಯುವಕ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಭಾನುವಾರ ರಜೆ ಇದ್ದ ಕಾರಣ ನಿಖಿಲ್ ಮನೆಯಲ್ಲಿಯೇ ಇದ್ದ, ತನ್ನ ತಾಯಿಯ ಜೊತೆ ಮಾತನಾಡುವ ವೇಳೆ ನನಗೆ ಏನು ಕೊಡಿಸಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಬಳಿಕ ಮೊಬೈಲ್ ಚಾರ್ಜರ್ ಕೊಡುವಂತೆ ಕೇಳಿದ್ದಾನೆ ಆಗ ಅವರ ತಾಯಿ ನನ್ನ ಬಳಿ ಚಾರ್ಜರ್ ಇಲ್ಲವೆಂದು ಹೇಳಿ ನೆರೆ ಮನೆಗೆ ಹೂ ಕಟ್ಟಲೆಂದು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಬಂದು ಮನೆಯ ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್ ಪ್ರತಿಕ್ರಿಯಿಸದೆ ಇದ್ದಾಗ ಗಾಬರಿಗೊಂಡ ಅವರ ತಾಯಿ ನೆರೆಹೊರೆಯವರನ್ನು ಕರೆದಿದ್ದಾರೆ. ಅವರು ಮನೆಯ ಬಾಗಿಲು ಮುರಿದು ಪರಿಶೀಲಿಸಿದಾಗ ನಿಖಿಲ್ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೃತ ನಿಖಿಲ್ ಗೌಡನ ತಾಯಿ ವರಲಕ್ಷ್ಮಮ್ಮನವರ ಹೇಳಿಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.