ಪ್ರಸಿದ್ಧ ಪ್ರಾಕೃತಿಕ ತಾಣವಾಗಿರುವ ಎತ್ತಿನಭುಜ ಶಿಖರಕ್ಕೆ ತೆರಳುವುದಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಸುಮಾರು 25 ಕಿಮೀ ದೂರದಲ್ಲಿ ಪಶ್ಚಿಮ ಘಟ್ಟಗಳ ನಡುವೆ 4265 ಅಡಿ ಎತ್ತರವಿರುವ ಎತ್ತಿನಭುಜ ಶಿಖರಕ್ಕೆ ಜಿಲ್ಲಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಟ್ರಕ್ಕಿಂಗ್ ಹೋಗುವುದನ್ನು ನಿಷೇಧ ಮಾಡಿದ್ದಾರೆ.
ಎತ್ತಿನಭುಜ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಅತಿಯಾದ ಗಾಳಿಯೊಂದಿಗೆ ಮಳೆಯಾಗುತ್ತಿದ್ದು ಅಲ್ಲಲ್ಲಿ ಗುಡ್ಡ ಕುಸಿತ, ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡ ಉಂಟಾಗುತ್ತಿದೆ. ವಿದ್ಯುತ್ ಕಂಬಗಳು ಬಿದ್ದು ಟ್ರಕ್ಕಿಂಗ್ ಹೋಗುವವರಿಗೆ ತೊಂದರೆಯಾಗುತ್ತಿದೆ.ರಾಜ್ಯದ ವಿವಿಧೆಡೆಯಿಂದ ಪ್ರತಿ ದಿನ ನೂರಾರು ಮಂದಿ ಟ್ರಕ್ಕಿಂಗ್ ಮಾಡಲು ಎತ್ತಿನಭುಜ ಅರಣ್ಯಕ್ಕೆ ಪ್ರವೇಶಿಸುತ್ತಾರೆ, ಅಲ್ಲಲ್ಲಿ ಫೋಟೋ ತೆಗೆಯುವ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಟ್ರಕ್ಕಿಂಗ್ ತೆರಳಿದ ಪ್ರವಾಸಿಗರಿಗೆ ಅರಣ್ಯದ ಮಧ್ಯೆ ಅಪಾಯ ಎದುರಾದಲ್ಲಿ ದುರ್ಗಮ ಅರಣ್ಯದಲ್ಲಿ ಇಲಾಖೆ ಸಿಬ್ಬಂದಿ ತಕ್ಷಣ ತೆರಳಲು ಕಷ್ಟಸಾಧ್ಯ, ಪ್ರಾಣ ಹಾನಿ ಅಥವಾ ಅಪಾಯ ತಡೆಗಟ್ಟುವ ದೃಷ್ಟಿಯಿಂದ ಟ್ರಕ್ಕಿಂಗ್ ನಿಷೇಧಿಸಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್‌ಕುಮಾರ್ ತಿಳಿಸಿದ್ದಾರೆ.