ಹೃದಯಾಘಾತದ ಸಮಸ್ಯೆಗಳಿಗೆ ಕಾರಣ ತಿಳಿಸಿದ ಡಾ. ಸಿ. ಎನ್.ಮಂಜುನಾಥ್

ಇತ್ತೀಚಿನ ದಿನಗಳಲ್ಲಿ ಯುವ ಜನರು ಹೃದಯಾಘಾತದಿಂದ ನಿಧನ ಹೊಂದುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು ನೆನ್ನೆಯಷ್ಟೇ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ಅವರ ಅಕಾಲಿಕ ನಿಧನಕ್ಕೆ ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ಅವರು ಸಂತಾಪ ಸೂಚಿಸಿದ್ದಾರೆ.

ಹೃದಯಾಘಾತದ ಸಂಬಂದ ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ಅವರು, ಇತ್ತೀಚಿನ ದಿನಗಳಲ್ಲಿ ಯುವ ಜನರು ಬಹಳ ಬೇಗ ತೂಕ ಹೆಚ್ಚಿಸುವ ಮತ್ತು ಬಹಳ ಬೇಗ ತೂಕ ಇಳಿಸಲು ಬಹಳಷ್ಟು ವ್ಯಾಯಾಮ ಮಾಡುತ್ತಾರೆ, ಹಾಗೆ ಮಾಡುವ ವ್ಯಾಯಾಮದಿಂದ ರಕ್ತನಾಳಗಳಿಗೆ ಸಮಸ್ಯೆ ಉಂಟಾಗುತ್ತದೆ ಮತ್ತು ಹೆಚ್ಚಾಗಿ ದುಶ್ಚಟಗಳಿಂದ, ಧೂಮಪಾನ, ಮಧ್ಯಪಾನ, ಅಧಿಕ ರಕ್ತದೊತ್ತಡ, ಜಂಕ್ ಫುಡ್ ಸಹ ಇದಕ್ಕೆ ಕಾರಣ ಇವುಗಳನ್ನೆಲ್ಲ ತ್ಯಜಿಸುವುದೇ ಉತ್ತಮ ಎಂದು ಸಲಹೆ ನೀಡಿದ್ದಾರೆ.

ಯುವಕರಲ್ಲಿ ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಕಳೆದ 10 ವರ್ಷದಲ್ಲಿ 22% ಹೆಚ್ಚಾಗಿದೆ, ಕೆಲವರು ನಾರ್ಕೋಟಿಕ್ ಡ್ರಗ್ಸ್, ಹುಕ್ಕಾ ಬಾರ್, ಗಾಂಜಾ ಸೇವಿಸುತ್ತಿದ್ದಾರೆ, ಕಳೆದ 6 ವರ್ಷದಲ್ಲಿ 5500 ಕ್ಕೂ ಹೆಚ್ಚು ಯುವಕರಿಗೆ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧ ಚಿಕಿತ್ಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಹೆಚ್ಚಿನ ಶ್ರಮದಾಯಕ ವ್ಯಾಯಾಮಗಳನ್ನು ಮಾಡುವುದು ಹಾಗೂ ಎನರ್ಜಿ ಡ್ರಿಂಕ್ಸ್ ಬಳಕೆ ಮಾಡುವುದು ಬೇಡ, ಲೋ ಬಿಪಿ ಇರುವವರು ಹೆಚ್ಚು ನೀರನ್ನು ಕುಡಿಯಬೇಕು, ಹೆಚ್ಚು ಹಣ್ಣುಗಳನ್ನು ಸೇವಿಸಬೇಕು ಎಂದಿದ್ದಾರೆ.